ಧಾರವಾಡ: ಇಲ್ಲಿನ ಉಪವಿಭಾಗಾಧಿಕಾರಿ ಹಾಗೂ ಉಪ ವಿಭಾಗ ದಂಡಾಧಿಕಾರಿಯಾಗಿ ಡಾ.ಗೋಪಾಲಕೃಷ್ಣ ಬಿ ಇಂದು ಅಧಿಕಾರ ಸ್ವೀಕರಿಸಿದರು.
ನಿಕಟಪೂರ್ವ ಉಪವಿಭಾಗಾಧಿಕಾರಿ ಮಹ್ಮದ್ ಜುಬೇರ್ ಅವರು ವರ್ಗಾವಣೆಯಾಗಿದ್ದು, ಹುದ್ದೆಯ ನಿರೀಕ್ಷೆಯಲ್ಲಿದ್ದಾರೆ. ಡಾ.ಗೋಪಾಲಕೃಷ್ಣ ಅವರು 2018 ರ ಬ್ಯಾಚಿನ ಐಎಎಸ್ ಅಧಿಕಾರಿಯಾಗಿದ್ದು, ಬೆಂಗಳೂರು ವೈದ್ಯಕೀಯ ಕಾಲೇಜಿನಿಂದ ಎಂಬಿಬಿಎಸ್ ಪದವಿ ಪಡೆದಿದ್ದಾರೆ. ಕೆಲಕಾಲ ವೈದ್ಯಕೀಯ ಸೇವೆ ಸಲ್ಲಿಸಿದ ಇವರು 2017 ರ ನಾಗರಿಕ ಸೇವಾ ಪರೀಕ್ಷೆಗಳಲ್ಲಿ ಆಡಿಟ್ ಸರ್ವಿಸ್ಗೆ ಆಯ್ಕೆಯಾಗಿದ್ದರು. 2018 ರ ಪರೀಕ್ಷೆಗಳಲ್ಲಿ ಐಎಎಸ್ಗೆ ಆಯ್ಕೆಯಾದರು.
![Dr. Gopalakrishna B](https://etvbharatimages.akamaized.net/etvbharat/prod-images/kn-dwd-4-ac-adikar-swikar-av-ka10001_25082020182610_2508f_1598360170_833.jpg)
ಕಲಬುರಗಿಯಲ್ಲಿ ಜಿಲ್ಲಾ ತರಬೇತಿ ಪೂರೈಸಿ ಇದೀಗ ಧಾರವಾಡ ಉಪವಿಭಾಗಾಧಿಕಾರಿ ಹುದ್ದೆಗೆ ನಿಯುಕ್ತಿಯಾಗಿದ್ದಾರೆ. ನೂತನ ಉಪವಿಭಾಗಾಧಿಕಾರಿಗಳನ್ನು ಜಿಲ್ಲೆಯ ತಹಶೀಲ್ದಾರ ಸಂತೋಷಕುಮಾರ ಬಿರಾದಾರ, ಶಶಿಧರ ಮಾಡ್ಯಾಳ, ಪ್ರಕಾಶ ನಾಶಿ, ಅಶೋಕ ಶಿಗ್ಗಾಂವಿ, ಅಮರೇಶ ಪಮ್ಮಾರ ಮತ್ತಿತರರು ಸ್ವಾಗತಿಸಿ, ಅಭಿನಂದಿಸಿದರು.