ಹುಬ್ಬಳ್ಳಿ: ಕುಂದಗೋಳ ಉಪಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಗೆ ಬಿಜೆಪಿ ಮುಖಂಡ ಅನುಪ್ ಬಿಜವಾಡ್ ಧಮ್ಕಿ ಹಾಕಿದ್ದರೆಂಬ ಆರೋಪ ಕೇಳಿಬಂದಿದ್ದು, ಈ ಸಂಬಂಧ ಸಚಿವ ಡಿಕೆ ಶಿವಕುಮಾರ್ ಅವರು ಅನುಪ್ ಅವರಿಗೆ ಕರೆ ಮಾಡಿ ವಿಚಾರಿಸಿದ್ದಾರೆ ಎನ್ನಲಾಗಿದೆ.
ಅನುಪ್ಗೆ ಫೋನ್ ಮಾಡಿದ ಡಿ. ಕೆ. ಶಿವಕುಮಾರ್ "ನಮ್ಮ ಹುಡುಗರಿಗೆ ಧಮ್ಕಿ ಹಾಕ್ತೀಯಂತೆ ಏನ್ ಸಮಾಚಾರ". ಎಂದು ಪ್ರಶ್ನಿಸಿದ್ದಾರೆ. ಆಗ ಅನೂಪ್ ನಾನು ಯಾರಿಗೂ ಧಮ್ಕಿ ಹಾಕಿಲ್ಲ. ನಿಮ್ಮ ಚುನಾವಣೆ ನಿವೂ ಮಾಡಿ, ನಮ್ಮ ಚುನಾವಣೆ ನಾವು ಮಾಡುತ್ತೇವೆ ಎಂದಿದ್ದಾರೆ ಎಂದು ತಿಳಿದುಬಂದಿದೆ.
ಆಗ ಡಿ. ಕೆ. ಶಿವಕುಮಾರ್, ನಿನ್ನ ಜೊತೆ ಆಮೇಲೆ ಮಾತನಾಡುತ್ತೇನೆ ಎಂದು ಕರೆ ಕಟ್ ಮಾಡಿದ್ದಾರೆ ಎನ್ನಲಾಗಿದೆ. ಈ ಮಾತುಕತೆ ಆಡಿಯೋ ಈಗ ಲಭ್ಯವಾಗಿದ್ದು, ತೀವ್ರ ಚರ್ಚೆಗೆ ಗ್ರಾಸವಾಗಿದೆ. ಅನುಪ್ ಬಿಜವಾಡ್ ಬಿಜೆಪಿ ಮುಖಂಡ ಶಂಕ್ರಣ್ಣ ಬಿಜವಾಡ್ ಪುತ್ರರಾಗಿದ್ದು, ಶಂಕರಣ್ಣ ಬಿಜವಾಡ್ ಬಿ. ಎಸ್. ಯಡಿಯೂರಪ್ಪನವರ ಆಪ್ತರಾಗಿದ್ದಾರೆ.