ಹುಬ್ಬಳ್ಳಿ: ಬಿಜೆಪಿ ಯಾವುದೇ ರೀತಿ ಕುದುರೆ ವ್ಯಾಪಾರ ಮಾಡಿಲ್ಲಾ. ಮೈತ್ರಿ ಸರ್ಕಾರದ ಅಸಮಾಧಾನದಿಂದ ಅತೃಪ್ತರು ಹೊರಗಡೆ ಬಂದಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಲೇವಡಿ ಮಾಡಿದ್ದಾರೆ.
ತಮ್ಮ ನಿವಾಸದಲ್ಲಿ ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಮೈತ್ರಿ ಸರ್ಕಾರದ ಅಸಮಾಧಾನದಿಂದ ಅತೃಪ್ತರು ಹೊರಗಡೆ ಬಂದಿದ್ದಾರೆ ವಿನಃ ಅವರನ್ನು ಕರೆ ತರುವ ಪ್ರಯತ್ನವನ್ನು ಬಿಜೆಪಿ ಮಾಡಿಲ್ಲ, ಅತೃಪ್ತ ಶಾಸಕರಿಗೆ ಸಚಿವ ಸ್ಥಾನ ನೀಡುವ ವಿಚಾರ ಸಿಎಂ ಹಾಗೂ ಹೈ ಕಮಾಂಡ್ ಗೆ ಬಿಟ್ಟಿದ್ದು ಎಂದು ಅವರು ಹೇಳಿದರು. ಬಿಜೆಪಿಗೆ ಜೆಡಿಎಸ್ ಬಾಹ್ಯ ಬೆಂಬಲ ನೀಡುವ ವಿಚಾರ ಅದು ಮಾಧ್ಯಮದಲ್ಲಿ ಬಂದಿದೆ. ಅಧಿಕೃತವಾಗಿ ಜೆಡಿಎಸ್ನಿಂದ ನಮಗೆ ಮಾಹಿತಿ ಬಂದಿಲ್ಲ ಎಂದರು.
ಕಾಂಗ್ರೆಸ್ ಹಾಗೂ ಜೆಡಿಎಸ್ ವಂಶಾಡಳಿತಕ್ಕೆ ಒಳಪಟ್ಟ ಪಕ್ಷಗಳು. ಹೀಗಾಗಿ ಕಾಂಗ್ರೆಸ್ ಪಕ್ಷ ದೇಶದಲ್ಲಿ ನಿರ್ನಾಮವಾಗುತ್ತಿದೆ. ಕಾಂಗ್ರೆಸ್ ಪಕ್ಷಕ್ಕೆ ಭವಿಷ್ಯವಿಲ್ಲ. ಕಳೆದ ಮೂರು ತಿಂಗಳಿಂದ ರಾಷ್ಟ್ರ ಮಟ್ಟದಲ್ಲಿ ಅಧ್ಯಕ್ಷರಿಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಲೇವಡಿ ಮಾಡಿದ್ದಾರೆ.
2018 ರಲ್ಲಿ ಜನಾದೇಶ ಬಿಜೆಪಿ ಪರವಾಗಿತ್ತು. ಆದರೆ ಕಾಂಗ್ರೆಸ್ ಹಾಗೂ ಜೆಡಿಎಸ್ ಅಧಿಕಾರವನ್ನು ಅತಿಕ್ರಮಿಸಿ ಕೊಂಡಿದ್ದರು. ಜನರ ಆದೇಶಕ್ಕೆ ಈಗ ಬೆಲೆ ಬಂದಿದೆ. ಸೋಮವಾರ ವಿಶ್ವಾಸ ಮತ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.