ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಸಿಬಿಟಿ ಬಸ್ ನಿಲ್ದಾಣವನ್ನು 17 ಕೋಟಿ ರೂ. ವೆಚ್ಚ ಮಾಡಿ ನಿರ್ಮಾಣ ಮಾಡಲಾಗಿದೆ. ಅಲ್ಲದೇ ಅದೇ ಬಸ್ ನಿಲ್ದಾಣದಲ್ಲಿ ವಾಣಿಜ್ಯ ಮಳಿಗೆಗಳನ್ನು ನಿರ್ಮಾಣ ಮಾಡಿ ಎರಡು ವರ್ಷ ಕಳೆದಿದೆ. ಆದರೆ ಆ ಮಳಿಗೆಗಳು ಇಂದಿಗೂ ಜನರಿಗೆ, ವ್ಯಾಪಾರಿಗಳಿಗೆ ಬಳಕೆ ಆಗುತ್ತಿಲ್ಲ. ಅದಕ್ಕೆ ಕಾರಣ ಅಧಿಕಾರಿಗಳು ಮಾಡಿದ ಯಡವಟ್ಟು ಎನ್ನಲಾಗುತ್ತಿದೆ.
ಕಟ್ಟಡವನ್ನು ಅವೈಜ್ಞಾನಿಕವಾಗಿ ನಿರ್ಮಾಣ ಮಾಡಿರುವ ಆರೋಪ ಕೇಳಿ ಬರುತ್ತಿದೆ. ಐದು ಅಂತಸ್ತಿನ ಕಟ್ಟಡದಲ್ಲಿರುವ ಮಳಿಗೆಗಳಿಗೆ ಸರಿಯಾದ ಪಾರ್ಕಿಂಗ್ ವ್ಯವಸ್ಥೆ ಇಲ್ಲ. ಅಲ್ಲದೇ ಕಟ್ಟಡಕ್ಕೆ ಲಿಫ್ಟ್ ವ್ಯವಸ್ಥೆ ಇಲ್ಲ. ವಾಯುವ್ಯ ಸಾರಿಗೆ ಸಂಸ್ಥೆಯ ಬಸ್ಗಳನ್ನೇ ಎಲ್ಲೆಂದರಲ್ಲಿ ರಸ್ತೆಗಳ ಮೇಲೆ ಪಾರ್ಕಿಂಗ್ ಮಾಡಲಾಗುತ್ತಿದೆ. ಹೀಗಾಗಿಯೇ ವ್ಯಾಪಾರಿಗಳು ಮಳಿಗೆಗಳನ್ನು ತೆಗೆದುಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ.
ಓದಿ:ಪ್ರೇಮಿಗಳ ದಿನಕ್ಕೆ ವಿರೋಧ: ವಿಡಿಯೋ ಸಂದೇಶ ಹರಿಬಿಟ್ಟ ಪ್ರಮೋದ್ ಮುತಾಲಿಕ್
ನಗರ ಸಾರಿಗೆ ಬಸ್ ನಿಲ್ದಾಣ ಹುಬ್ಬಳ್ಳಿಯ ಹೃದಯ ಭಾಗದಲ್ಲಿದೆ. ವಾಯುವ್ಯ ಸಾರಿಗೆ ಸಂಸ್ಥೆ ಬಸ್ ನಿಲ್ದಾಣದಲ್ಲಿ ವಾಣಿಜ್ಯ ಮಳಿಗೆಗಳನ್ನು ತೆರೆದು ಆದಾಯ ಕ್ರೋಢೀಕರಣಕ್ಕೆ ಪ್ಲ್ಯಾನ್ ಹಾಕಿದೆ. ಅಲ್ಲದೇ ಒಂದು ಮಳಿಗೆಗೆ 18 ಲಕ್ಷ ರೂಪಾಯಿ ಬಾಡಿಗೆಯನ್ನು ಒಂದು ತಿಂಗಳಿಗೆ ನಿಗದಿ ಮಾಡಿದೆ. ಅಷ್ಟೊಂದು ಹಣವನ್ನು ನೀಡಿ ಮಳಿಗೆಗಳನ್ನು ತೆಗೆದುಕೊಳ್ಳಲು ವ್ಯಾಪಾರಿಗಳು ಮುಂದೆ ಬರುತ್ತಿಲ್ಲ. ಹೀಗಾಗಿ ಮೂರು ಬಾರಿ ಕರೆದ ಟೆಂಡರ್ಗಳಿಗೆ ಜನರು ಬಿಡ್ ಮಾಡಲು ಬರದೇ ಇರೋದು ವಾಯುವ್ಯ ಸಾರಿಗೆ ಸಂಸ್ಥೆಗೆ ತಲೆನೋವು ತಂದಿದೆ. ಸಾರ್ವಜನಿಕರಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ಸರ್ಕಾರ ಕೆಲಸವನ್ನು ಮಾಡಬೇಕು. ಆದರೆ ಈ ಯೋಜನೆಯ ಲಾಭ ಜನರಿಗೂ ಸಿಗುತ್ತಿಲ್ಲ. ಇತ್ತ ಸಾರಿಗೆ ಇಲಾಖೆಯ ಆದಾಯ ಆ ಕಟ್ಟಡ ನಿರ್ವಹಣೆಗೆ ಖರ್ಚಾಗುತ್ತಿದೆ. ಅಧಿಕಾರಿಗಳು ಮಾಡಿದ ತಪ್ಪಿನಿಂದಾಗಿ ಸಾರ್ವಜನಿಕ ಹಣ ಪೋಲಾಗುತ್ತಿದೆ ಎಂಬ ಬಲವಾದ ಆರೋಪ ಕೇಳಿ ಬಂದಿದೆ.