ಹುಬ್ಬಳ್ಳಿ: ಸಫಾಯಿ ಕರ್ಮಚಾರಿಗಳನ್ನು ಕಾನೂನುಬಾಹಿರವಾಗಿ ಕೆಲಸದಿಂದ ತೆಗೆದುಹಾಕಲಾಗಿದೆ ಎಂದು ಆರೋಪಿಸಿ ಇಲ್ಲಿನ ರೈಲ್ವೆ ನಿಲ್ದಾಣ ಆವರಣದಲ್ಲಿ ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ರಕ್ತದಲ್ಲಿ ಪತ್ರ ಬರೆಯುವ ಮೂಲಕ ರಕ್ತ ಪತ್ರ ಚಳವಳಿಯನ್ನು ನಡೆಸಲಾಯಿತು.
ಧಾರವಾಡ ಜಿಲ್ಲಾ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಪೌರ ಕಾರ್ಮಿಕರ ಮತ್ತು ನೌಕರರ ಸಂಘ ಧಾರವಾಡ ಜಿಲ್ಲಾ ಸಮಿತಿ ವತಿಯಿಂದ ನಡೆಸಲಾಗುತ್ತಿರುವ ಪ್ರತಿಭಟನೆ 4ನೇ ದಿನಕ್ಕೆ ಕಾಲಿಟ್ಟಿದ್ದು, ಇಂದು ರಕ್ತದಲ್ಲಿ ಪತ್ರ ಬರೆದು ಮೌನ ಪ್ರತಿಭಟನೆ ಮಾಡಲಾಯಿತು.
ಈ ವೇಳೆ ಕಾರ್ಮಿಕ ಮುಖಂಡ ಡಾ ವಿಜಯ ಗುಂಟ್ರಾಳ ಮಾತನಾಡಿ, ರೈಲ್ವೆ ನಿಲ್ದಾಣದಲ್ಲಿ ಸ್ವಚ್ಛತಾ ಕೆಲಸ ನಿರ್ವಹಿಸುತ್ತಿರುವ 95 ಜನ ಸಫಾಯಿ ಕರ್ಮಚಾರಿಗಳನ್ನು ಕಾನೂನು ಬಾಹಿರವಾಗಿ ತಗೆದುಹಾಕಿದ್ದು ಖಂಡನೀಯ. ಕರ್ಮಚಾರಿಗಳನ್ನು ಮರಳಿ ಕೆಲಸಕ್ಕೆ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದರು.
ಈ ಕುರಿತು ರೈಲ್ವೆ ಅಧಿಕಾರಿಗಳಿಗೆ ಪತ್ರ ಬರೆದರೂ ಯಾವುದೇ ಪ್ರಯೋಜನವಾಗಿಲ್ಲ ಹಾಗೂ ಕಾರ್ಮಿಕ ಇಲಾಖೆ ಸಹ ಯಾವುದೇ ರೀತಿಯ ಸ್ಪಂದನೆ ನೀಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಮುಂದಿನ ದಿನಗಳಲ್ಲಿ ರೈಲು ರೋಖಾ ಚಳವಳಿ ನಡೆಸಲಾಗುವುದು ಎಂದು ಉಗ್ರ ಹೋರಾಟದ ಎಚ್ಚರಿಕೆ ನೀಡಿದರು.
ಇದನ್ನೂ ಓದಿ: ಸುವರ್ಣಸೌಧದತ್ತ ಪಂಚಮಸಾಲಿ ಸಮುದಾಯ ಪಾದಯಾತ್ರೆ: ಅಧಿವೇಶನದ ಎರಡನೇ ದಿನ ಸಾಲು ಸಾಲು ಪ್ರತಿಭಟನೆ