ಹುಬ್ಬಳ್ಳಿ: ಪಶ್ಚಿಮ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್. ಬಿ. ಸಂಕನೂರು ಅವರು ಶಿಕ್ಷಕರ, ವಿದ್ಯಾರ್ಥಿಗಳ ಪರ ಸಾಕಷ್ಟು ಕೆಲಸ ಮಾಡಿದ್ದಾರೆ. ಈ ಹಿನ್ನೆಲೆ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ ಅವರಿಗೆ ಸಂಪೂರ್ಣ ಬೆಂಬಲ ನೀಡಲಿದೆ ಎಂದು ವಿಧಾನ ಪರಿಷತ್ ಸದಸ್ಯ ಅರುಣ್ ಶಹಾಪುರ್ ತಿಳಿಸಿದ್ದಾರೆ.
ನಗರದ ಖಾಸಗಿ ಹೋಟೆಲ್‌ನಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಶಿಕ್ಷಣ ಕ್ಷೇತ್ರದಲ್ಲಿ ಹೊಸ ಬದಲಾವಣೆ ತರುತ್ತಿದ್ದಾರೆ. ಪದವೀಧರರಿಗೆ ಮುಂದಿನ ದಿನಗಳಲ್ಲಿ ಉದ್ಯೋಗ ಸೃಷ್ಟಿ ಜೊತೆಗೆ ಸ್ವಂತ ಉದ್ಯೋಗ ಮಾಡಲು ಎಲ್ಲಾ ಸಿದ್ಧತೆ ನಡೆಸುತ್ತಿರುವುದು ಸಂತಸದ ಸಂಗತಿ ಎಂದರು.
ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆ, ಆತ್ಮ ನಿರ್ಭರ ಮೂಲಕ ಕೈಗಾರಿಕೆ ಕ್ಷೇತ್ರಕ್ಕೆ ಉತ್ತೇಜನ ನೀಡುತ್ತಿರುವುದು, ಉದ್ಯೋಗ ಸೃಷ್ಟಿ ಹಾಗೂ ಶಿಕ್ಷಣ ಕ್ಷೇತ್ರಕ್ಕೆ ಒಳಿತಾಗುತ್ತದೆ ಎಂಬ ಆಲೋಚನೆಯಿಂದ ಪಶ್ಚಿಮ ಪದವೀಧರ ಕ್ಷೇತ್ರದ ಅಭ್ಯರ್ಥಿ ಎಸ್. ಬಿ. ಸಂಕನೂರ ಅವರಿಗೆ ಬೆಂಬಲ ನೀಡಲಾಗುತ್ತಿದೆ. ಆದ್ದರಿಂದ, ಎಲ್ಲಾ ಶಿಕ್ಷಕರು ಹಾಗೂ ಪದವೀಧರ ವಿಧ್ಯಾರ್ಥಿಗಳು ಮುಂದಿನ ಭವಿಷ್ಯಕ್ಕಾಗಿ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.