ಹುಬ್ಬಳ್ಳಿ: ಕಾಂಗ್ರೆಸ್ ನಾಯಕರು ನಿತ್ಯ ಕಿತ್ತಾಟದಲ್ಲಿ ತೊಡಗಿದ್ದಾರೆ. ಸಿದ್ದರಾಮಯ್ಯ ಕಂಡರೆ ಡಿಕೆಶಿಗೆ ಆಗಲ್ಲ, ಡಿಕೆಶಿ ಕಂಡರೆ ಸಿದ್ಧರಾಮಯ್ಯಗೆ ಆಗಲ್ಲ. ಒಬ್ಬರನ್ನೊಬ್ಬರು ಎತ್ತಿಕಟ್ಟೋ ಕೆಲಸ ಮಾಡುತ್ತಿದ್ದಾರೆ. ಇವರಿಂದ ಜನರಿಗೆ ಉತ್ತಮ ಆಡಳಿತ ನಿರೀಕ್ಷೆ ಮಾಡಲು ಸಾಧ್ಯವಿಲ್ಲ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಹೇಳಿದರು.
ನಗರದಲ್ಲಿಂದು ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಅವರು, ಚುನಾವಣೆ ನಂತರವೂ ಜಗಳ ಮುಂದುವರಿಯಲಿದೆ. ಜಗಳ ಆಡುವವರು ಜನರಿಗೆ ಒಳ್ಳೆಯ ಆಡಳಿತ ಕೊಡಲು ಸಾಧ್ಯವೇ..? ಎಂದು ಪ್ರಶ್ನಿಸಿದ ಅವರು, ಹೀಗಾಗಿ ಬಿಜೆಪಿಯೇ ಒಳ್ಳೆಯ ಆಯ್ಕೆಯಾಗಿದೆ ಎಂದು ಜನರು ನಂಬಿದ್ದಾರೆ. ಕಾಂಗ್ರೆಸ್ ನಾಯಕರು ಪ್ರಸ್ಟ್ರೇಷನ್ನಲ್ಲಿದ್ದಾರೆ. ಹೀಗಾಗಿ ನಮ್ಮ ನಾಯಕರ ಮೇಲೆ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಕಾಂಗ್ರೆಸ್ ಸುಳ್ಳು ಭರವಸೆಗಳ ಗೋಪುರ ಕಟ್ಟಿದೆ ಎಂದು ಹೇಳಿದರು.
ಜಿಲ್ಲೆಯಲ್ಲಿ ನಡೆಯಲಿರುವ ವಿಜಯ ಸಂಕಲ್ಪ ಯಾತ್ರೆಯಲ್ಲಿ ಶಾ ಭಾಗಿ: ಸದ್ಯ ವಿಜಯ ಸಂಕಲ್ಪ ಅಭಿಯಾನ ನಡೆಯುತ್ತಿದೆ. ಸರ್ಕಾರದ ಸಾಧನೆಗಳನ್ನು ಜನರಿಗೆ ಮುಟ್ಟಿಸಲಾಗುತ್ತಿದೆ. ಅಮಿತ್ ಶಾ ಅವರೂ ಧಾರವಾಡ ಜಿಲ್ಲೆಯಲ್ಲಿ ವಿಜಯ ಸಂಕಲ್ಪ ಅಭಿಯಾನದಲ್ಲಿ ಭಾಗಿಯಾಗುತ್ತಾರೆ. ಕರ್ನಾಟಕದಲ್ಲಿ 4 ಕೋಟಿ ಜನರಿಗೆ ಪಡಿತರ ಕೊಡುವ ಕಾರ್ಯ ನಡೆದಿದೆ. ಕಾಂಗ್ರೆಸ್ ಏನನ್ನೂ ಮಾಡಿಲ್ಲ. ಎಲ್ಲ ಅಭಿವೃದ್ಧಿ ಕೆಲಸಗಳು ಬಿಜೆಪಿಯಿಂದ ನಡೆದಿವೆ. ಕಾಂಗ್ರೆಸ್ ಸುಳ್ಳು ಭರವಸೆಗಳ ಸೌಧ ಕಟ್ಟುತ್ತಿದೆ, ಕರ್ನಾಟಕದ ಜನತೆಯನ್ನು ಭ್ರಮಾ ಲೋಕದಲ್ಲಿ ತೇಲಿಸುತ್ತಿದ್ದಾರೆ.
ರಾಜಸ್ಥಾನದಲ್ಲಿ 10 ದಿನದಲ್ಲಿ ಸಾಲ ಮನ್ನಾ ಮಾಡೋದಾಗಿ ಹೇಳಿದ್ದರು. ಇದುವರೆಗೂ ಭರವಸೆ ಈಡೇರಿಸಿಲ್ಲ. ಲಕ್ಷಾಂತರ ರೈತರು ಸಾಲ ಮನ್ನಾಕ್ಕಾಗಿ ಎದುರು ನೋಡ್ತಿದಾರೆ. ನಾಲ್ಕು ವರ್ಷದಲ್ಲಿ 16 ಬಾರಿ ಪೇಪರ್ ಲೀಕ್ ಆಗಿದೆ. ಕಾಂಗ್ರೆಸ್ ಹೇಳುವುದೆಲ್ಲಾ ಸುಳ್ಳು. ಕೊಟ್ಟ ಭರವಸೆಯನ್ನು ಕಾಂಗ್ರೆಸ್ ಈಡೇರಿಸಿಲ್ಲ. ಛತ್ತೀಸಗಢದಲ್ಲಿಯೂ ಭರವಸೆ ಈಡೇರಿಸಿಲ್ಲ. ಕಾಂಗ್ರೆಸ್ ಸುಳ್ಳು ಭರವಸೆಗಳ ಗೋಪುರ ಕಟ್ಟಿದೆ ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.
ಕಾಮನ್ ಮ್ಯಾನ್ ಸಿಎಂ: ಬಸವರಾಜ ಬೊಮ್ಮಾಯಿ ಕಾಮನ್ ಮ್ಯಾನ್ ಸಿಎಂ. ರೈತರು, ರೈತರ ಮಕ್ಕಳಿಗಾಗಿ ಹಗಲು ರಾತ್ರಿ ಕೆಲಸ ಮಾಡುತ್ತಿದ್ದಾರೆ. ಆದರೆ, ಕಾಂಗ್ರೆಸ್ ಪಾರ್ಟಿ ಅವರಿಗೆ ಅಪಮಾನ ಮಾಡುತ್ತಿದೆ. ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ಬೊಮ್ಮಾಯಿಗೆ ಅಪಮಾನ ಮಾಡಿದ್ದಾರೆ. ಬೇರೆ ಬೇರೆ ಶಬ್ದಗಳಿಂದ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಮಾತಾಡಿದ್ದಾರೆ. ಇದು ಕರ್ನಾಟಕ ಜನರು ಕ್ಷಮಿಸಲ್ಲ ಎಂದ ಅರುಣ್ ಸಿಂಗ್ ಸಿಎಂ ಬೊಮ್ಮಾಯಿ ಪರ ಬ್ಯಾಟ್ ಬೀಸಿದರು.
156 ಸೀಟು ಗೆಲುತ್ತೇವೆ: ಕರ್ನಾಟಕದಲ್ಲಿ ನಾವು 156 ಸೀಟ್ ಗೆಲುತ್ತೇವೆ. ಕರ್ನಾಟಕದಲ್ಲಿ ಮತ್ತೆ ನಾವೇ ಅಧಿಕಾರಕ್ಕೆ ಬರುತ್ತೇವೆ. ಮೋದಿ, ಯಡಿಯೂರಪ್ಪ ಮಾರ್ಗದರ್ಶನದಲ್ಲಿ ನಾವು ಗೆಲುತ್ತೇವೆ ಎಂದರು. ಶಾಸಕ ಯತ್ನಾಳ್ ವಿಷಯಕ್ಕೆ ಪ್ರತಿಕ್ರಿಯಿಸಿದ ಅವರು, ಯತ್ನಾಳ ಅವರಿಗೆ ಯಾರ ವಿರುದ್ಧವು ಮಾತನಾಡದಂತೆ ನೋಟಿಸ್ ನೀಡಲಾಗಿದೆ ಎಂದರು.
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆಗೆ ಬಿವೈ ವಿಜಯೇಂದ್ರ ಪ್ರತಿಕ್ರಿಯೆ: ಬಿಎಸ್ ಯಡಿಯೂರಪ್ಪ ಅವರ ಬಗ್ಗೆ ನನಗೆ ಅಪಾರ ಗೌರವವಿದೆ ಬಿಎಸ್ವೈ ಕುರಿತು ಮಾತನಾಡಲ್ಲ ಎಂದು ಶಾಸಕ ಬಸನಗೌಡ ಪಾಟೀಲ್ ಹೇಳಿಕೆಗೆ ಬಿವೈ ವಿಜಯೇಂದ್ರ ಪ್ರತಿಕ್ರಿಯಿಸಿದ್ದಾರೆ. ಪಕ್ಷದ ಹಿತದೃಷ್ಟಿ ಮತ್ತು ಭವಿಷ್ಯದ ದೃಷ್ಟಿಯಿಂದ ಇದೊಂದು ಒಳ್ಳೆಯ ಬೆಳವಣಿಗೆ ಎಂದು ಹೇಳಿದ ಅವರು, ಯತ್ನಾಳ್ ಅವರು ಹಿರಿಯರು. ನಾನು ಅವರ ಬಗ್ಗೆ ಹೆಚ್ಚಿಗೆ ಏನನ್ನು ಹೇಳಲು ಬಯಸುವುದಿಲ್ಲ. ನಾಲ್ಕು ಬಾರಿ ರಾಜ್ಯದ ಸಿಎಂ ಆಗಿದ್ದವರು ಬಿಎಸ್ವೈ. ಪ್ರಸ್ತುತ ಅವರು ಸಿಎಂ ಇಲ್ಲದಿದ್ದರೂ ಎಲ್ಲಾ ಸಮುದಾಯದ ಜನರು ಒಪ್ಪಿಕೊಂಡಿರುವ ಧೀಮಂತ ನಾಯಕರಾಗಿದ್ದಾರೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಬಿಎಸ್ವೈ ಬಗ್ಗೆ ಗೌರವ ಎಂದ ಯತ್ನಾಳ್ ಹೇಳಿಕೆ: ಪಕ್ಷದ ಬೆಳವಣಿಗೆಗೆ ಪೂರಕ ಎಂದ ಬಿವೈ ವಿಜಯೇಂದ್ರ