ಹುಬ್ಬಳ್ಳಿ: ಕೊರೊನಾ ವೈರಸ್ ಭೀತಿ ಹಿನ್ನೆಲೆ ಲಾಕ್ಡೌನ್ ಆದೇಶ ಘೋಷಣೆಯಾಗಿದ್ದು, ಶೈಕ್ಷಣಿಕ ಕ್ಷೇತ್ರದಲ್ಲಿ ಕೂಡ ಇದರ ಎಫೆಕ್ಟ್ ತಟ್ಟಿದೆ. ಇದರಿಂದಾಗಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಆತ್ಮಸ್ಥೈರ್ಯವನ್ನು ವೃದ್ಧಿಸುವ ಸದುದ್ದೇಶದಿಂದ ಹು-ಧಾ ಮಹಾನಗರ ಪಾಲಿಕೆ ವಿನೂತನ ಪ್ರಯತ್ನವೊಂದನ್ನು ಕೈಗೆತ್ತಿಕೊಂಡಿದೆ.
ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ತುಂಬಲು ಮತ್ತು ವಿಷಯ ಪುನರ್ ಮನನದ ಮಾಹಿತಿ ಒದಗಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಧ್ವನಿ ಮುದ್ರಿಸಿರುವ ಆಡಿಯೋವೊಂದನ್ನು 'ಕಸ ಸಂಗ್ರಹಿಸುವ ವಾಹನ'ಗಳಲ್ಲಿ ಮನೆ ಮನೆಗೆ ತಲುಪಿಸಿ ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ ಎಳೆಯುವಂತಹ ಕಾರ್ಯ ಮಾಡುತ್ತಿದೆ.
ಹೇಗಿದೆ ಧ್ವನಿವರ್ಧಕದಲ್ಲಿ ಪ್ರಚಾರ?
ಎಸ್.ಎಸ್.ಎಲ್.ಸಿ ಯ ವಾರ್ಷಿಕ ಪರೀಕ್ಷೆಯ ಸಿದ್ಧತೆಯಲ್ಲಿ ತೊಡಗಿರುವ ವಿದ್ಯಾರ್ಥಿಗಳಿಗೆ ಧಾರವಾಡ ಆಕಾಶವಾಣಿ ಕೇಂದ್ರ ಪುನರ್ ಮನನ ತರಗತಿಗಳನ್ನು ಪ್ರಸಾರ ಮಾಡುತ್ತಿದೆ. ನಿತ್ಯ ಮಧ್ಯಾಹ್ನ 2.30 ರಿಂದ 3ರ ವರೆಗೆ ನುರಿತ ಶಿಕ್ಷಕರಿಂದ ಇಂಗ್ಲೀಷ್, ಗಣಿತ ಮತ್ತು ವಿಜ್ಞಾನ ವಿಷಯಗಳ ರೇಡಿಯೋ ಪಾಠ ಮರುಪ್ರಸಾರ ಆಗುತ್ತಿದೆ ಎಂಬ ಘೋಷಣೆ ಕೇಳಿಬರುತ್ತಿದೆ.
ಚಂದನ ವಾಹಿನಿಯಲ್ಲಿ ಸಂಪನ್ಮೂಲ ಶಿಕ್ಷಕರಿಂದ ಮಧ್ಯಾಹ್ನ 3 ರಿಂದ 4.30 ತನಕ ತರಗತಿಗಳನ್ನು ನಡೆಸುತ್ತಿದೆ. ಮರುದಿನ ಬೆಳಗ್ಗೆ 6ರಿಂದ 7.30ರ ವರೆಗೆ ಮರುಪ್ರಸಾರ ಮಾಡುತ್ತಿದೆ. ಮೇ 15ರ ವರೆಗೆ ಗಣಿತ ಮತ್ತು ವಿಜ್ಞಾನ, ನಂತರದ ಆರು ದಿನ ಸಮಾಜ ವಿಜ್ಞಾನ ಮತ್ತು ಇಂಗ್ಲೀಷ್ ಹಾಗೂ ಕನ್ನಡದ ಪುನರ್ ಮನನದ ತರಗತಿಗಳು ನಡೆಯಲಿದೆ ಎಂದು ಧ್ವನಿವರ್ಧಕದಲ್ಲಿ ಪ್ರಚಾರ ಮಾಡಲಾಗುತ್ತಿದೆ.
ಕೊನೆಯಲ್ಲಿ ವಿದ್ಯಾರ್ಥಿಗಳೇ 'ನಿಮ್ಮ ಗೆಲುವೇ ನಮ್ಮ ಒಲವು’ ಎಂದು ಸ್ಫೂರ್ತಿಯ ಮಾತುಗಳನ್ನು ಹೇಳಲಾಗುತ್ತಿದ್ದು, ಕಸ ಸಂಗ್ರಹಿಸುವ ವಾಹನಗಳಲ್ಲಿ ನಿತ್ಯವೂ, ಸ್ವಚ್ಛತೆ, ತೆರಿಗೆ ತುಂಬುವುದು, ಕೊರೊನಾ ಸೋಂಕಿನಿಂದ ದೂರವಿರಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿತ್ತು. ಆದ್ರೆ ಈಗ ಎಸ್.ಎಸ್.ಎಲ್.ಸಿಯ ವಿದ್ಯಾರ್ಥಿಗಳಿಗೆ ಅನುಕೂಲವಾಗಲು ಧ್ವನಿಮುದ್ರಿಕೆಯ ಆಡಿಯೋ ಕೂಡ ಪ್ರಸಾರ ಮಾಡುತ್ತಿರುವುದರಿಂದ ಪಾಲಿಕೆ ಕಾರ್ಯಕ್ಕೆ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ.