ದಾವಣಗೆರೆ: ಮಹಿಳೆಗೆ ಏನಾದರೂ ತೊಂದರೆ ಆದರೆ ಮಹಿಳಾ ಪಡೆ ರಕ್ಷಣೆಗೆ ನಿಲ್ಲುತ್ತದೆ. ಆದರೆ, ಇಲ್ಲೋರ್ವ ಮಹಿಳಾ ಠಾಣೆ ಪಿಎಸ್ಐ ತನ್ನ ಸೊಸೆಗೆ ವರದಕ್ಷಿಣೆ ಕಿರುಕುಳ ನೀಡಿ, ಆಕೆಯ ಆತ್ಮಹತ್ಯೆಗೆ ಕಾರಣವಾಗಿದ್ದಾಳೆ. ಪ್ರಕರಣ ಸಾಬೀತಾದ ಹಿನ್ನೆಲೆ ಪಿಎಸ್ಐ ಹಾಗೂ ಇವರ ಪುತ್ರ ಜೈಲು ಪಾಲಾಗಿದ್ದಾರೆ.
ಘಟನೆ ಹಿನ್ನೆಲೆ:
ಹುಬ್ಬಳ್ಳಿ ಮಹಿಳಾ ಪೊಲೀಸ್ ಠಾಣೆಯ ಪಿಎಸ್ಐ ಲೀಲಾವತಿ ಎಂಬುವರ ಮಗನಾದ ನವೀನ್ ಕುಮಾರ್, ದಾವಣಗೆರೆ ನಗರದ ಸರಸ್ವತಿ ಬಡಾವಣೆಯ ನಿವಾಸಿ ನಿವೃತ್ತ ಎಂಜಿನಿಯರ್ ಬಸಪ್ಪ ಎಂಬುವರ ಮಗಳಾದ ಶರ್ಮಿಳಾ ಜೊತೆ 2014ರಲ್ಲಿ ವಿವಾಹ ಮಾಡಿಕೊಂಡಿದ್ದರು.
ಮದುವೆ ಸಮಯದಲ್ಲಿ 10 ಲಕ್ಷ ರೂ. ಹಣ, 40 ತೊಲೆ ಬಂಗಾರ, 2 ಕೆಜಿ ಬೆಳ್ಳಿಯನ್ನು ವರದಕ್ಷಿಣೆಯಾಗಿ ನೀಡಲಾಗಿತ್ತು ಎನ್ನಲಾಗಿದೆ. ಇಷ್ಟಕ್ಕೆ ಸುಮ್ಮನಾಗದ ಪಿಎಸ್ಐ ಲೀಲಾವತಿ ಹಾಗೂ ಇವರ ಮಗ, ಶರ್ಮಿಳಾಗೆ ಹೆಚ್ಚಿನ ವರದಕ್ಷಿಣೆ ತರುವಂತೆ ಒತ್ತಾಯಿಸಿ 03-09-2015ರಂದು ಆಕೆಯನ್ನು ಮನೆಯಿಂದ ಹೊರಗೆ ಹಾಕಿ ಬಳಿಕ ವಕೀಲರಿಂದ ನೋಟಿಸ್ ಕಳುಹಿಸಿ ಮಾನಸಿಕ ಹಿಂಸೆ ನೀಡಿದ್ದರು ಎನ್ನಲಾಗಿದೆ.
ಇದರಿಂದ ಬೇಸತ್ತ ಶರ್ಮಿಳಾ, 07-09-2015ರಂದು ತಮ್ಮ ತಂದೆ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಳು. ಈ ಬಗ್ಗೆ ತಂದೆ ಬಸಪ್ಪ ದಾವಣಗೆರೆ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು. ಡಿವೈಎಸ್ಪಿ ಅಶೋಕ್ ಕುಮಾರ್ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
4 ವರ್ಷಗಳ ನಂತ್ರ ಜೈಲುಪಾಲಾದ ಆರೋಪಿಗಳು:
ನ್ಯಾಯಾಧೀಶರಾದ ಅಂಬಾದಾಸ್ ಕುಲಕರ್ಣಿ ಅವರು ಶಿಕ್ಷೆ ವಿಧಿಸಿ ಆದೇಶ ನೀಡಿದ್ದಾರೆ. ಆರೋಪಿಗಳಾದ ಲೀಲಾವತಿ(56), ನವೀನ್ ಕುಮಾರ್(32)ಗೆ ತಲಾ 7 ವರ್ಷ ಕಠಿಣ ಶಿಕ್ಷೆ ಹಾಗೂ ತಲಾ 18 ಸಾವಿರ ರೂ. ದಂಡ ವಿಧಿಸಿ ಆದೇಶ ನೀಡಿದ್ದಾರೆ.