ದಾವಣಗೆರೆ: ಕೇಂದ್ರ ಸರ್ಕಾರವು ಈರುಳ್ಳಿ ರಫ್ತು ನಿಷೇಧ ಮಾಡಿರುವುದರಿಂದ ಬೆಳೆಗಾರರು ಕಂಗಾಲಾಗಿದ್ದಾರೆ. ಮೊದಲೇ ಬೆಳೆ ನಾಶವಾಗಿ ಸಂಕಷ್ಟದಲ್ಲಿರುವ ರೈತರು, ವರ್ತಕರಿಗೆ ಕೇಂದ್ರದ ನಿರ್ಧಾರವು ಬರಸಿಡಿಲು ಬಡಿದಂತಾಗಿದೆ.
ಮಧ್ಯಕರ್ನಾಟಕದ ಹೆಬ್ಬಾಗಿಲು ದಾವಣಗೆರೆಯ ಎಪಿಎಂಸಿ ಈರುಳ್ಳಿ ಮಾರುಕಟ್ಟೆ ರಾಜ್ಯದ ಪ್ರಮುಖ ಮಾರ್ಕೆಟ್ ಗಳಲ್ಲಿ ಒಂದು. ಇಲ್ಲಿಗೆ ಹಾವೇರಿ, ಬಳ್ಳಾರಿ, ಚಿತ್ರದುರ್ಗ ಸೇರಿದಂತೆ ಬೇರೆ ಬೇರೆ ಜಿಲ್ಲೆಗಳಿಂದ ಈರುಳ್ಳಿ ತರುತ್ತಾರೆ. ಆದರೆ ಕಳೆದ ವರ್ಷ ಭಾರೀ ನಷ್ಟ ಅನುಭವಿಸಿದ್ದ ಬಹುತೇಕ ರೈತರು ಈ ವರ್ಷವೂ ಅದೇ ಪರಿಸ್ಥಿತಿ ಎದುರಾಗುವ ಆತಂಕದಲ್ಲಿದ್ದಾರೆ.
ಎಪಿಎಂಸಿ ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಾಲ್ ಗೆ 2100 ರೂಪಾಯಿಯಿಂದ ಹಿಡಿದು 2300ರವರೆಗೆ ಈರುಳ್ಳಿ ಖರೀದಿ ಆಗಿದೆ. ಕಳೆದ ವಾರ ಮೂರುವರೆ ಸಾವಿರ ಇದ್ದ ದರ, ಈಗ ಇಷ್ಟೊಂದು ಪ್ರಮಾಣದಲ್ಲಿ ಧಾರಣೆ ಕಡಿಮೆಯಾಗಿರುವುದು ಬೆಳೆಗಾರರ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ. ಒಂದೆಡೆ ಬೆಳೆದ ಬೆಳೆಯೂ ಇಲ್ಲ, ಇನ್ನೊಂದೆಡೆ ದರವೂ ಸಿಗ್ತಿಲ್ಲ. ಕೇಂದ್ರ ಸರ್ಕಾರವು ರಫ್ತು ಬ್ಯಾನ್ ಮಾಡಿರುವುದರಿಂದ ಈ ಧಾರಣೆ ಇನ್ನು ಕಡಿಮೆ ಆಗುವ ಸಾಧ್ಯತೆ ಇದೆ. ಇದೀಗ ಮಹಾರಾಷ್ಟ್ರದ ನಾಸಿಕ್‌ನಿಂದ ದಾವಣಗೆರೆಗೆ ಈರುಳ್ಳಿ ಬರುತ್ತಿದೆ.
ಸುತ್ತಮುತ್ತಲಿನ ಜಿಲ್ಲೆಗಳಿಂದ ಬರುತ್ತಿದ್ದ ಈರುಳ್ಳಿ ಲಾರಿಗಳು ಕಡಿಮೆಯಾಗಿವೆ. ಉಳ್ಳಾಗಡ್ಡಿ ನೂರಾರು ಕ್ವಿಂಟಾಲ್ ಬರುತಿತ್ತು. ಆದ್ರೆ ಈಗ ಇದು ಕಡಿಮೆ ಆಗಿದೆ. ಇದಲ್ಲದೇ ವಾಹನಗಳ ಬಾಡಿಗೆಯೂ ಜಾಸ್ತಿ ಯಾಗಿದೆ. ಕಡಿಮೆ ಹಣ ತೆಗೆದುಕೊಂಡು ಹೋಗುವ ಪರಿಸ್ಥಿತಿ ಎದುರಾಗಿದೆ. ಈರುಳ್ಳಿ ಬೆಳೆದ ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಬಂದಿದೆ. ಮನೆಯಲ್ಲಿ ಅಪ್ಪ, ಅಮ್ಮ, ಹೆಂಡತಿ ಹಾಗೂ ಮಕ್ಕಳ ಮುಖ ನೋಡಿಕೊಂಡು ಬದುಕುವ ಪರಿಸ್ಥಿತಿ ಎದುರಾಗಿದೆ. ಬೆಳೆ ಬೆಳೆಯಲು ಮಾಡಿದ್ದ ಸಾಲ ತೀರಿಸುವುದಿರಲಿ, ಅಸಲು ಬರುತ್ತಿಲ್ಲ. ಕೇಂದ್ರ ಸರ್ಕಾರ ಈರುಳ್ಳಿ ರಫ್ತು ನಿಷೇಧ ಮಾಡಿದರೆ ಮುಂಬರುವ ದಿನಗಳಲ್ಲಿ ಮತ್ತಷ್ಟು ಗಂಭೀರ ಪರಿಸ್ಥಿತಿ ಎದುರಾಗಲಿದೆ ಎಂದು ರೈತರು ಹಾಗೂ ವರ್ತಕರು ತಮ್ಮ ಅಳಲು ತೋಡಿಕೊಂಡಿದ್ದಾರೆ.