ದಾವಣಗೆರೆ: ಹೊನ್ನಾಳಿ ತಾಲೂಕಿನಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬಡವರು, ನಿರ್ಗತಿಕರಿಗೆ ಆಹಾರ ಧಾನ್ಯದ ಕಿಟ್ ವಿತರಿಸಲಾಯಿತು.
ಹೊನ್ನಾಳಿ ತಾಲೂಕಿನ ಮುಕ್ತೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಿಮ್ಮೇನಹಳ್ಳಿ, ಕೆಂಗಲಹಳ್ಳಿ, ಮುಕ್ತೇನಹಳ್ಳಿ ಗ್ರಾಮದ 249 ಬಡ ಹಾಗೂ ಕೂಲಿ ಕಾರ್ಮಿಕರಿಗೆ, ಅಸಹಾಯಕ ಸ್ಥಿತಿಯಲ್ಲಿರುವವರೆಗೆ ವೈಯಕ್ತಿಕವಾಗಿ ಶಾಸಕ ಎಂ. ಪಿ. ರೇಣುಕಾಚಾರ್ಯ ಆಹಾರ ಧಾನ್ಯದ ಕಿಟ್ಗಳನ್ನು ವಿತರಿಸಿದರು.
ಯಾವಾಗಲೂ ಕೋವಿಡ್ ಮಾರ್ಗಸೂಚಿ ಉಲ್ಲಂಘಿಸಿ ವಿವಾದಕ್ಕೆ ಕಾರಣವಾಗುತ್ತಿದ್ದ ರೇಣುಕಾಚಾರ್ಯ ಅವರು ಈಗ ಎಚ್ಚೆತ್ತುಕೊಂಡಿದ್ದಾರೆ. ಕಿಟ್ ವಿತರಿಸುವಾಗ ಸಾಮಾಜಿಕ ಅಂತರ ಕಾಪಾಡಿಕೊಂಡು ಜನರು ಮಾಸ್ಕ್ ಹಾಕಿ ಕುಳಿತಿದ್ದು ವಿಶೇಷವಾಗಿತ್ತು.
ಗ್ರಾಮೀಣ ಭಾಗದಲ್ಲಿ ಕೊರೊನಾ ಪತ್ತೆಯಾಗುತ್ತಿದ್ದು, ಜನರು ಕೆಲಸವಿಲ್ಲದೇ ಪರದಾಡುತ್ತಿದ್ದಾರೆ. ಊಟಕ್ಕೂ ಪರದಾಡುವ ಸ್ಥಿತಿ ಬಂದಿದೆ. ಜನಪ್ರತಿನಿಧಿಯಾಗಿ ನಿಮ್ಮ ನೆರವಿಗೆ ಬರುವುದು ನನ್ನ ಕರ್ತವ್ಯ. ಈಗಾಗಲೇ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದೇನೆ. ಕೊರೊನಾ ತಡೆಗೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದೇನೆ. ಅಧಿಕಾರಿಗಳಿಗೆ ಹಳ್ಳಿ ಕಟ್ಟೆಗಳಲ್ಲಿ ಕುಳಿತು ಜನರಲ್ಲಿ ಜಾಗೃತಿ ಮೂಡಿಸುವಂತೆ ಸೂಚಿಸಿದ್ದೇನೆ ಎಂದು ತಿಳಿಸಿದರು.