ದಾವಣಗೆರೆ : ಮಧ್ಯ ಕರ್ನಾಟಕ ಭಾಗದ ಶಿಕ್ಷಣ ಕೇಂದ್ರ ದಾವಣಗೆರೆಯ ವಿಶ್ವವಿದ್ಯಾಲಯದಲ್ಲಿ ಇದೀಗ ಅಕ್ರಮದ ವಾಸನೆ ಕೇಳಿ ಬಂದಿದೆ. ವಿವಿಧ ಉಪನ್ಯಾಸಕರ ಹುದ್ದೆಗೆ ಲಕ್ಷಾಂತರ ರೂಪಾಯಿ ಹಣ ಪಡೆದು ವಿವಿಯ ಕುಲಪತಿ ಅಕ್ರಮವಾಗಿ ನೇಮಕಾತಿ ಮಾಡಿದ್ದಾರೆ ಎಂದು ವಿಶ್ವ ಕರ್ನಾಟಕ ರಕ್ಷಣಾ ವೇದಿಕೆ ಆರೋಪಿಸಿದೆ.
ದಾವಣಗೆರೆಯ ಶಿವಗಂಗೋತ್ರಿ ವಿಶ್ವವಿದ್ಯಾಲಯಲ್ಲಿ ಕಳೆದ ತಿಂಗಳ 24 ರಂದು 37 ಅಭ್ಯರ್ಥಿಗಳನ್ನು ನೇಮಕ ಮಾಡಿ ಆದೇಶ ಹೊರಡಿಸಿತ್ತು. 125 ಹುದ್ದೆಗಳಲ್ಲಿ 37 ಹುದ್ದೆಗಳಿಗೆ ಅಭ್ಯರ್ಥಿಗಳ ಆಯ್ಕೆಯಾಗಿದ್ದು, ಇದರಲ್ಲಿ ಅಕ್ರಮ ನಡೆದಿದೆ ಎಂಬ ಅನುಮಾನ ವ್ಯಕ್ತವಾಗಿದೆ.
ವಿವಿಯ ಕುಲಪತಿ, ಕುಲಾಧಿಪತಿ ಸೇರಿಕೊಂಡು ಲಕ್ಷ ಲಕ್ಷ ಹಣ ಪಡೆದು ತಮಗೆ ಬೇಕಾದವರನ್ನು ನೇಮಕ ಮಾಡಿಕೊಂಡಿದ್ದಾರೆ ಎಂಬ ಆರೋಪ ಮಾಡಲಾಗಿದೆ. ಕಳೆದ ಮೇ 21 ಹಾಗೂ 22 ರಂದು ನೇಮಕಾತಿಗಾಗಿ ವಿವಿಯಲ್ಲಿ ಸಂದರ್ಶನ ನಡೆಸಿದ ವಿಶ್ವವಿದ್ಯಾಲಯ 24 ನೇ ತಾರೀಖಿನ ಮಧ್ಯಾಹ್ನ ಒಂದು ಗಂಟೆಗೆ ಸಿಂಡಿಕೇಟ್ ಸಭೆ ಮಾಡಿತ್ತು. ಅದೇ ದಿನ ಸಂದರ್ಶನ ನಡೆಸಿ ನಾಲ್ಕು ಗಂಟೆಗೆ ನೇಮಕವಾದ ಅಭ್ಯರ್ಥಿಗಳಿಗೆ ಆದೇಶ ಪತ್ರವನ್ನು ನೀಡಿದೆ. ಇದು ಹೇಗೆ ಸಾಧ್ಯ ಎಂಬುದು ರಕ್ಷಣಾ ವೇದಿಕೆಯ ಪ್ರಶ್ನೆಯಾಗಿದೆ.
ವಿಶ್ವವಿದ್ಯಾಲಯ 1:3 ರ ಅನುಪಾತದಲ್ಲಿ ಪಟ್ಟಿ ಪ್ರಕಟಿಸದೇ ತಮಗೆ ಬೇಕಾದವರಿಗೆ ಉದ್ಯೋಗ ನೀಡಿದೆ. ಅಷ್ಟೇ ಅಲ್ಲ, ಆಯ್ಕೆಯಾದ ಅಭ್ಯರ್ಥಿಗಳ ಹೆಸರನ್ನು ನೋಟಿಸ್ ಬೋರ್ಡ್ ನಲ್ಲಿ ಹಾಕದೇ ಇರೋದು ಸಾಕಷ್ಟು ಅನುಮಾನ ಮೂಡಿಸಿದೆ. ಹೀಗಾಗಿ, 37 ಅಭ್ಯರ್ಥಿಗಳ ನೇಮಕಾತಿಯಲ್ಲಿ ಅಕ್ರಮ ನಡೆದಿದ್ದು, ತಮಗೆ ಬೇಕಾದವರಿಗೆ ಮಾತ್ರ ಕರೆ ಮಾಡಿ ಸಂದರ್ಶನಕ್ಕೆ ಕರೆಸಿಕೊಂಡಿದ್ದು,ಅವರಿಗೆ ಮಾತ್ರ ನೇಮಕಾತಿ ಆದೇಶ ಪತ್ರ ನೀಡಿದ್ದಾರೆ. ಇದರಲ್ಲಿ ಕುಲಸಚಿವರು ಹಣ ಪಡೆದು ಬೋಧಕ ಸಿಬ್ಬಂದಿಯನ್ನು ನೇಮಕ ಮಾಡಿಕೊಂಡಿದ್ದಾರೆ ಎನ್ನುವುದು ವಿಶ್ವ ಕರ್ನಾಟಕ ರಕ್ಷಣಾ ವೇದಿಕೆ ಆರೋಪವಾಗಿದೆ.
ಈ ಬಗ್ಗೆ ತನಿಖೆ ನಡೆಸುವಂತೆ ಒತ್ತಾಯಿಸಿ ರಾಜ್ಯಪಾಲರಿಗೆ ದೂರು ನೀಡಲು ಮುಂದಾಗಿದ್ದೇವೆ ಎಂದು ವೇದಿಕೆಯ ರಾಜ್ಯಾಧ್ಯಕ್ಷ ಯಲ್ಲಪ್ಪ ಹೇಳಿದ್ದಾರೆ. ಇನ್ನು ಪರೀಕ್ಷಾ ವಿಧಾನದಲ್ಲಿ ಸಹ ಹಲವು ಅನುಮಾನಗಳಿದ್ದು, ಓಎಮ್ಆರ್ ಇಲ್ಲದ ಉತ್ತರ ಪತ್ರಿಕೆಗಳನ್ನ ನೀಡಲಾಗಿತ್ತು. ಹೀಗಾಗಿ ಅಭ್ಯರ್ಥಿಗಳಿಗೆ ತಾವು ಸರಿ ಉತ್ತರ ಬರೆದಿದ್ದರೂ ಕಡಿಮೆ ಅಂಕ ಬಂದಿವೆ ಎಂಬ ಶಂಕೆಯೂ ಇದೆ.
ಕಳೆದ ಬಾರಿ ನೇಮಕ ಪ್ರಕ್ರಿಯೆಯಲ್ಲಿ ಭ್ರಷ್ಟಾಚಾರ ನಡೆದಿದ್ದರಿಂದ ನೇಮಕಾತಿ ಪ್ರಕ್ರಿಯೆಯನ್ನು ರದ್ದು ಮಾಡಲಾಗಿತ್ತು. ಇದೀಗ ಮತ್ತೆ ಅದೇ ರೀತಿ ನೇಮಕ ಪ್ರಕ್ರಿಯೆಯಲ್ಲಿ ಭ್ರಷ್ಟಾಚಾರ ನಡೆದಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು. ಇಲ್ಲದಿದ್ದರೆ ಕೆಲವೇ ದಿನಗಳಲ್ಲಿ ವಿವಿ ಆವರಣದಲ್ಲಿ ಪೆಂಡಾಲ್ ಹಾಕಿ ಧರಣಿ ನಡೆಸುವುದಾಗಿ ಸಂಘಟನೆ ಮುಖಂಡರು ಎಚ್ಚರಿಕೆಯನ್ನು ನೀಡಿದ್ದಾರೆ.