ದಾವಣಗೆರೆ: ಮಸೀದಿ, ಮಂದಿರಗಳಲ್ಲಿ ಕೊರೊನಾ ನೆಗೆಟಿವ್ ಸರ್ಟಿಫಿಕೇಟ್ ಇಟ್ಟುಕೊಂಡು ಬಂದವರಿಗೆ ಮಾತ್ರ ಪ್ರವೇಶ ಹಾಗೂ ಸೌಲಭ್ಯ ನೀಡುವುದಾಗಿ ಆಡಳಿತ ಮಂಡಳಿಗಳು ನಿರ್ಧರಿಸಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಆರ್. ಬೀಳಗಿ ಸಲಹೆ ನೀಡಿದರು.
ನಗರದ ಎಸ್ಪಿ ಕಚೇರಿ ಸಭಾಂಗಣದಲ್ಲಿ ಆಯುಧ ಪೂಜೆ, ವಿಜಯದಶಮಿ, ಈದ್ ಮಿಲಾದ್ ಹಾಗೂ ದೀಪಾವಳಿ ಹಬ್ಬದ ಸಲುವಾಗಿ ಕರೆಯಲಾಗಿದ್ದ "ನಾಗರಿಕ ಸೌಹಾರ್ದ ಸಮನ್ವಯ'' ಸಭೆಯಲ್ಲಿ ಮಾತನಾಡಿದ ಅವರು, ಧಾರ್ಮಿಕ ಮಂದಿರಗಳಿಗೆ ಕೊರೊನಾ ಆರ್ಟಿಪಿಸಿಆರ್ ಟೆಸ್ಟ್ ಮಾಡಿಸಿ ನೆಗೆಟಿವ್ ಇದ್ದವರಿಗೆ ಪ್ರವೇಶ ನೀಡಿ ಎಂದು ಜಿಲ್ಲಾಡಳಿತ ಆದೇಶ ನೀಡಲು ಆಗದು. ನೀವೇ ಈ ಬಗ್ಗೆ ಕ್ರಮ ಕೈಗೊಂಡರೆ ಜಿಲ್ಲಾಡಳಿತಕ್ಕೆ ಕೊರೊನಾ ವಿರುದ್ಧದ ಹೋರಾಟಕ್ಕೆ ಬಲ ಸಿಗುತ್ತದೆ ಎಂದು ಅಭಿಪ್ರಾಯಪಟ್ಟರು.
ಕೇಂದ್ರ ಹಾಗೂ ರಾಜ್ಯ ಸರ್ಕಾರ ನೀಡಿರುವ ನಿರ್ದೇಶನಗಳನ್ನು ಎಲ್ಲರೂ ಕಟ್ಟುನಿಟ್ಟಾಗಿ ಪಾಲಿಸಲೇಬೇಕು. ಇದರಲ್ಲಿ ಯಾವುದೇ ವಿನಾಯಿತಿ ಇಲ್ಲ. ಸಾಂಸ್ಕೃತಿಕ ಕಾರ್ಯಕ್ರಮ, ಸಭೆ ಹಾಗೂ ಸಮಾರಂಭಗಳಿಗೆ ನೀಡಿರುವ ಮಾರ್ಗಸೂಚಿ ಉಲ್ಲಂಘನೆಯಾಗಬಾರದು. ಈ ನಿಟ್ಟಿನಲ್ಲಿ ನಾನು ಈಗಾಗಲೇ ಆದೇಶ ಹೊರಡಿಸಿದ್ದೇನೆ. ಜನರು ಹಬ್ಬವನ್ನು ಸರಳ, ಶಾಂತಿಯುತವಾಗಿ ಆಚರಣೆ ಮಾಡಬೇಕು ಎಂದು ಕಿವಿಮಾತು ಹೇಳಿದರು.
ಸಭೆಯಲ್ಲಿಯೇ ಕೆಲವರು ಮಾಸ್ಕ್ ಸರಿಯಾಗಿ ಧರಿಸಿ ಮಾತನಾಡಿದರು. ಮೈಕ್ ಮೂಲಕವೂ ಸೋಂಕು ಹರಡುವ ಸಾಧ್ಯತೆ ಇರುತ್ತದೆ. ಹಾಗಾಗಿ ನಾನೇ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳುತ್ತೇನೆ. ಬಾಯಿ ಹಾಗೂ ಮೂಗು ಮುಚ್ಚುವಂತೆ ಮಾಸ್ಕ್ ಧರಿಸದಿದ್ದರೆ ಏನೂ ಪ್ರಯೋಜನ ಆಗಲ್ಲ. ಅಂತರ ಕಾಪಾಡಿಕೊಳ್ಳುತ್ತೇನೆಂದು ಪ್ರತಿಯೊಬ್ಬರು ಪ್ರತಿಜ್ಞೆ ಮಾಡಬೇಕು ಎಂದು ಕರೆ ನೀಡಿದರು.