ದಾವಣಗೆರೆ: ರಾಜಕೀಯ ಲಾಭಕ್ಕಾಗಿ ಕೆರಳಿಸುವ ಹೇಳಿಕೆ ಕೊಟ್ಟು, ನಂತರ ಸುಳ್ಳು ಕೇಸ್ ದಾಖಲಿಸುವುದು ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ರಾಮಪ್ಪ ಅವರ ನಿತ್ಯದ ಕಾಯಕವಾಗಿದೆ ಎಂದು ಬಿಜೆಪಿ ಮುಖಂಡ ಲೋಕಿಕೆರೆ ನಾಗರಾಜ್ ಆರೋಪಿಸಿದರು.
ಇತ್ತೀಚೆಗೆ ನಡೆದ ಪಾಲಿಕೆ ಚುನಾವಣೆಯಲ್ಲಿ ಹಳೇ ದ್ವೇಷ ಇಟ್ಟುಕೊಂಡು, ರಾಮಪ್ಪ ನಮಗೆ ಅವಾಚ್ಯ ಪದಗಳಿಂದ ನಿಂದಿಸಿದ್ದರು. ನಾವು ಪೊಲೀಸರ ಮಾತಿಗೆ ಬೆಲೆ ಕೊಟ್ಟು ಸುಮ್ಮನೆ ಹೋಗಿದ್ದೆವು ಎಂದರು. ನಾವು ಅವರಿಗೆ ಯಾವುದೇ ರೀತಿಯಲ್ಲಿ ನಿಂದಿಸದಿದ್ದರೂ ಸಹ ಅವರು, ಮರುದಿನ ನನ್ನ ವಿರುದ್ಧ ಸುಳ್ಳು ಜಾತಿ ನಿಂದನೆ ಕೇಸ್ ದಾಖಲಿಸಿದ್ದಾರೆ ಎಂದು ಆರೋಪಿಸಿದರು.
ವೈಯುಕ್ತಿಕ ಲಾಭಕ್ಕಾಗಿ ಈ ರೀತಿ ಸುಳ್ಳು ಕೇಸ್ ದಾಖಲಿಸುವುದು ಅವರಿಗೆ ರೂಢಿಯಾಗಿದೆ. ಇದೇ ರೀತಿ ಅಮಾಯಕರ ವಿರುದ್ಧ 15 ರಿಂದ 16ಕೇಸ್ ಗಳನ್ನು ಹಾಕಿಸಿ ಇವರ ಬೇಳೆ ಕಾಳು ಬೇಯಿಸಿಕೊಂಡಿದ್ದಾರೆ ಎಂದರು. ಕಾನೂನಿಗೆ ಬೆಲೆಕೊಟ್ಟು ಇಂದು ನಾನು ಪೊಲೀಸ್ ಗೆ ಶರಣಾಗತಿ ಆಗುತ್ತಿದ್ದೇನೆ. ಇಂತಹ ನೂರು ಕೇಸ್ ಹಾಕಿದರೂ ನಾನು ಜಗ್ಗಲ್ಲ. ನಮ್ಮವರಿಗಾಗಿ ನಮ್ಮ ಸಮಾಜಕ್ಕಾಗಿ ಹೋರಾಡುತ್ತೇನೆ ಎಂದು ನಾಗರಾಜ್ ಗುಡುಗಿದರು.
ಇನ್ನು, ಲೋಕಸಭಾ ಚುನಾವಣೆಯಲ್ಲಿ ರಾಮಪ್ಪ ಅನ್ಯ ಸಮುದಾಯದವರನ್ನು ನಿಂದಿಸಿದ್ದ ಆಡಿಯೋ ಬಹಿರಂಗಗೊಂಡಿತ್ತು. ಇದರಿಂದ ಕೆರಳಿದ್ದ ಆ ಸಮುದಾಯ ರಾಮಪ್ಪ ಅವರ ವಿರುದ್ಧ ಪ್ರತಿಭಟನೆ ನಡೆಸಿತ್ತು. ಈ ಹಿನ್ನೆಲೆ ಅಂದು ವೈ. ರಾಮಪ್ಪ ಹಲವು ಮುಖಂಡರ ವಿರುದ್ಧ ಜಾತಿ ನಿಂದನೆ ಕೇಸ್ ದಾಖಲಿಸಿದ್ದರು. ಆ ಪ್ರಕರಣದಲ್ಲಿ ನಾಗರಾಜ್ ಹೆಸರು ಕೂಡ ಇತ್ತು.
ಇನ್ನು ಈ ಕುರಿತು ಸ್ಪಷ್ಟನೆ ನೀಡಿರುವ ರಾಮಪ್ಪ, ನಾಗರಾಜ್ ಅವರು ಜಾತಿ ಹಾಗೂ ಅಶ್ಲೀಲ ಪದ ಪ್ರಯೋಗಿಸಿದರೂ ನಾನು ತಾಳ್ಮೆ ವಹಿಸಿದ್ದೆ. ಬಳಿಕ ಜಾತಿ ನಿಂದನೆ ದೂರು ದಾಖಲಿಸಿದೆ ಎಂದು ಹೇಳಿದ್ದಾರೆ. ನಾನು ಅಟ್ರಾಸಿಟಿಯಲ್ಲಿ ಪಿಎಚ್ ಡಿ ಮಾಡಿದ್ದೇನೆ ಎಂದು ಅವರು ಹೇಳಿದ್ದಾರೆ, ನನ್ನ ಪಿಎಚ್ಡಿ ಬಗ್ಗೆ ಮಾತನಾಡಲು ಅವರಿಗೆ ನೈತಿಕತೆ ಇಲ್ಲ, ನಾನು ಸಂಸ್ಕಾರ, ಸನ್ಮಾರ್ಗದಿಂದ ಬೆಳೆದವನು, ದೇವಾಲಯಗಳ ವಿಷಯದಲ್ಲಿ ಅಧ್ಯಾಯನ ಮಾಡಿ ಪಿಎಚ್ ಡಿ ಪಡೆದಿದ್ದೇನೆ ಎಂದರು.
ಹತ್ತು ದಿನ ನ್ಯಾಯಾಂಗ ಬಂಧನ
ಜಾತಿ ನಿಂದನೆ ಪ್ರಕರಣ ಹಿನ್ನೆಲೆ ಬಿಜೆಪಿ ಮುಖಂಡ ಲೋಕಿಕೆರೆ ನಾಗರಾಜ್ ಅವರಿಗೆ ಹತ್ತು ದಿನ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಪ್ರಕರಣ ಹಿನ್ನೆಲೆ ನಾಗರಾಜ್ ನೇರವಾಗಿ ದಾವಣಗೆರೆ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಪ್ರಕರಣ ವಿಚಾರಣೆ ನಡೆಸಿದ ನ್ಯಾಯಮೂರ್ತಿ ನಾಗಶ್ರೀ ಅವರು, ಡಿಸೆಂಬರ್ 7ರವರೆಗೆ ನ್ಯಾಯಾಂಗ ಬಂಧನಕ್ಕೆ ಸೂಚಿಸಿದ್ದಾರೆ.