ದಾವಣಗೆರೆ: ಯುವ ಸಮೂಹ ಗುಟ್ಕಾಕ್ಕೆ ಹೊಂದಿಕೊಂಡು ತಮ್ಮ ಜೀವನವನ್ನೇ ನರಕ ಮಾಡಿಕೊಳ್ಳುತ್ತಿದ್ದಾರೆ. ಆದರೆ ಬೆಣ್ಣೆ ನಗರಿಯಲ್ಲಿ ಮಾತ್ರ ಇದರ ಬಗ್ಗೆ ಜಾಗೃತಿ ನಡೆಯುತ್ತಿದ್ದು, ಯುವ ಸಮೂಹ ಇದರಿಂದ ಹೊರ ಬಂದಿರುವ ಶುಭ ಸುದ್ದಿಯೊಂದನ್ನು ಅಧಿಕಾರಿಗಳು ನೀಡಿದ್ದಾರೆ. ಗುಟ್ಕಾ ನಿಯಂತ್ರಣಕ್ಕೆ ಅಂಗಡಿಗಳ ಮೇಲೆ ದಾಳಿಗಳು ನಡೆಯುತ್ತಿದ್ದು, ದಂಡ ಕೂಡ ವಿಧಿಸಲಾಗುತ್ತಿದೆ.
ಓದಿ: ಮುನಾವರ್ ಫಾರೂಕಿಗೆ ಸುಪ್ರೀಂ ಕೋರ್ಟ್ನಿಂದ ಮಧ್ಯಂತರ ಜಾಮೀನು
ಬೆಣ್ಣೆನಗರಿಯಲ್ಲಿ ಈ ಬಾರಿಯ ವರದಿ ಪ್ರಕಾರ 25 ರಿಂದ 30 ವರ್ಷದ ವಯೋಮಿತಿಯ ಯುವಕರು ಈ ಗುಟ್ಕಾ ವ್ಯಾಮೋಹದಿಂದ ಹೊರಬಂದಿದ್ದಾರಂತೆ. ಇನ್ನು 14 ರಿಂದ 21 ವಯಸ್ಸಿನ ಶೇ 25 ರಷ್ಟು ಯುವಕರು ಗುಟ್ಕಾ ಸೇವನೆ ಮಾಡುತ್ತಿಲ್ಲವೆಂದು ವರದಿ ಹೇಳುತ್ತಿದೆ.
ಆದರೂ ಕೂಡ ಜಿಲ್ಲೆಯ ಸರ್ವೇಕ್ಷಣಾಧಿಕಾರಿ ಹಾಗೂ ಅವರ ತಂಡ ನಿರಂತರವಾಗಿ ಅಂಗಡಿಗಳ ಮೇಲೆ ದಾಳಿ ನಡೆಸಿ ದಂಡ ವಿಧಿಸಿ ಕೆಲವರ ಮೇಲೆ ಪ್ರಕರಣಗಳನ್ನು ದಾಖಲು ಮಾಡಿ ಮಾರಾಟಕ್ಕೆ ಕಡಿವಾಣ ಹಾಕುತ್ತಿದ್ದಾರೆ. ತಂಬಾಕು ಹಾಗೂ ಗುಟ್ಕಾದಿಂದಾಗುವ ದುಷ್ಪರಿಣಾಮಗಳ ಬಗ್ಗೆ ಶಾಲಾ ಮಕ್ಕಳು, ಕಾಲೇಜಿನ ಮಕ್ಕಳು ಹಾಗೂ ಶಾಲೆಯ ಶಿಕ್ಷಕರಿಗೆ, ಮುಂತಾದವರಿಗೆ ಕರೆದು ಅಧಿಕಾರಿಗಳು ಜಾಗೃತಿ ಮೂಡಿಸುತ್ತಿದ್ದಾರೆ.
ಗುಟ್ಕಾ ಅಂಗಡಿಗಳ ಮೇಲೆ ಆದ ದಾಳಿಗಳೆಷ್ಟು..?
ಗುಟ್ಕಾ ಹಾಗೂ ತಂಬಾಕು ಮಾರಾಟ ನಿಯಂತ್ರಣ ಮಾಡಲು ಜಿಲ್ಲಾ ಸರ್ವೇಕ್ಷಣಾ ಅಧಿಕಾರಿಗಳು ದಾಳಿ ನಡೆಸುತ್ತಿದ್ದು, 2018-19 ರಲ್ಲಿ 24 ದಾಳಿ ಮಾಡಬೇಕೆಂಬ ಗುರಿ ಹೊಂದಲಾಗಿತ್ತು. ಆದರೆ 55 ದಾಳಿಗಳನ್ನು ಮಾಡಿದ್ದು, 2020ರಲ್ಲಿ 48 ದಾಳಿಗಳ ಗುರಿ ಹೊಂದಲಾಗಿತ್ತು. 65 ದಾಳಿಗಳನ್ನು ಮಾಡಲಾಗಿದ್ದು, ಇನ್ನು 20-21ರಲ್ಲಿ ಕೊರೊನಾ ಹಾವಳಿ ಇದ್ದಿದ್ದರಿಂದ 72 ದಾಳಿಯ ಗುರಿ ಹೊಂದಲಾಗಿತ್ತು.
ಬದಲಾಗಿ 52 ದಾಳಿಗಳನ್ನು ಮಾಡಿ ನಿಯಂತ್ರಿಸಲು ಅಧಿಕಾರಿಗಳ ಪ್ರಯತ್ನ ಮುಂದುವರೆದಿದೆ. ಇನ್ನು 2020- 21ರ ಏಪ್ರಿಲ್ ನಿಂದ ಡಿಸೆಂಬರ್ ವರೆಗೆ ಒಟ್ಟು 56490 ರೂಪಾಯಿ ದಂಡ ಸಂಗ್ರಹಿಸಿ ಅದೇ ಹಣವನ್ನು ಜಾಗೃತಿಗೆ ಬಳಕೆ ಮಾಡಲಾಗುತ್ತಿದೆಯಂತೆ.
ಇನ್ನು ಕೆಲ ಶ್ರಮಿಕರು ಈ ಗುಟ್ಕಾ ಹಾಗೂ ತಂಬಾಕು ದುಷ್ಚಟಗಳಿಗೆ ಬಲಿಯಾಗುತ್ತಿದ್ದು, ದುಡಿದ ಹಣವೆಲ್ಲ ಗುಟ್ಕಾ ಸೇವನೆಗೆ ಇಡುವ ಪರಿಸ್ಥಿತಿ ನಿರ್ಮಾಣ ಆಗಿದೆಯಂತೆ. ಇದರಿಂದ ನಮ್ಮ ದೇಶದ ಇತರೆ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಗುಟ್ಕಾ ನಿಷೇಧ ಮಾಡಿದಂತೆ ನಮ್ಮ ರಾಜ್ಯದಲ್ಲಿಯೂ ನಿಷೇಧ ಮಾಡಬೇಕೆಂದು ದಾವಣಗೆರೆ ಜನರ ಒತ್ತಾಯ ಆಗಿದೆ.
ಒಟ್ಟಾರೆ ಒಳ್ಳೆ ವಿಚಾರ ಏನೆಂದರೆ ದಾವಣಗೆರೆ ಹಾಗೂ ಹೊನ್ನಾಳಿ ತಾಲೂಕುಗಳೆರಡು ಪ್ರಸ್ತುತವಾಗಿ ತಂಬಾಕು ಮುಕ್ತ ತಾಲೂಕುಗಳಾಗಿ ಕೆಲವೇ ದಿನಗಳಲ್ಲಿ ಹೊರ ಹೊಮ್ಮಲಿವೆ ಎಂದು ಅಧಿಕಾರಿಗಳು ಭರವಸೆ ನೀಡಿದ್ದು, ಮುಂದಿನ ದಿನಗಳಲ್ಲಿ ಕಾದುನೋಡಬೇಕಾಗಿದೆ.