ದಾವಣಗೆರೆ: ಕೊರೊನಾ ವೈರಾಣು ತಗುಲಿದರೆ ಸಾಯುತ್ತಾರೆಂದು ಯಾರೂ ಭಾವಿಸಬೇಡಿ. ನಮ್ಮ ಕುಟುಂಬದಲ್ಲಿಯೇ ನನ್ನನ್ನು ಸೇರಿದಂತೆ ನನ್ನ ಪತ್ನಿ, ಸಹೋದರ ಹಾಗೂ ಅವರ ಮಕ್ಕಳಿಗೆ ಸೋಂಕು ತಗುಲಿದೆ. ನಾವು ಇದನ್ನು ಅವಮಾನ ಎಂದುಕೊಂಡಿಲ್ಲ. ಆತ್ಮವಿಶ್ವಾಸದಿಂದ ಧೈರ್ಯವಾಗಿ ಎದುರಿಸಿದ್ದೇವೆ. ಜನರು ಸಹ ಆತಂಕಕ್ಕೆ ಒಳಗಾಗುವುದು ಬೇಡ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ. ಪಿ. ರೇಣುಕಾಚಾರ್ಯ ಅವರು ಜನರಿಗೆ ಧೈರ್ಯ ತುಂಬಿದ್ದಾರೆ.
ಬೆಂಗಳೂರಿನ ತಮ್ಮ ಸರ್ಕಾರಿ ನಿವಾಸದಲ್ಲಿ ಹೋಂ ಕ್ವಾರಂಟೈನ್ ನಲ್ಲಿರುವ ರೇಣುಕಾಚಾರ್ಯ ಈ ಕುರಿತು ಮಾತನಾಡಿ, ಕೊರೊನಾ ಸೋಂಕಿನ ಲಕ್ಷಣಗಳಿದ್ದರೂ ಪರೀಕ್ಷೆಗೆ ಒಳಪಡದೆ ಉದಾಸೀನ ಮಾಡಬೇಡಿ. ಸೋಂಕು ಮುಚ್ಚಿಟ್ಟುಕೊಂಡರೆ ಅದು ನಮ್ಮ ಜೊತೆಗೆ ನಮ್ಮ ಕುಟುಂಬ ಹಾಗೂ ಸಮಾಜಕ್ಕೂ ಮಾರಕವಾಗಲಿದೆ. ಕೊನೆ ಕ್ಷಣದಲ್ಲಿ ಶ್ವಾಸಕೋಶ ಹಾಗೂ ಇತರೆ ಅಂಗಗಳಿಗೆ ಹರಡಿದ ನಂತರ ಆಸ್ಪತ್ರೆಗೆ ಹೋಗುವುದರಿಂದ ಯಾವುದೇ ಪ್ರಯೋಜನವಿಲ್ಲ ಎಂದು ಹೇಳಿದ್ದಾರೆ.
ನಾನು ಕಳೆದ ಸೋಮವಾರ ಹೊನ್ನಾಳಿಯಿಂದ ಬೆಂಗಳೂರಿಗೆ ಬರುವ ವೇಳೆ ಆರೋಗ್ಯದಲ್ಲಿ ವ್ಯತ್ಯಾಸ ಕಾಣಿಸಿದ ಹಿನ್ನೆಲೆ ಶಾಸಕ ಮಿತ್ರರ ಸಲಹೆ ಮೇರೆಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಅನೇಕ ಮಾದರಿಯ ಪರೀಕ್ಷೆಗಳನ್ನು ಮಾಡಿಸಿ ವೈದ್ಯರ ಸಲಹೆ ಮೇರೆಗೆ ಹೋಂ ಕ್ವಾರಂಟೈನ್ ನಲ್ಲಿದ್ದೇನೆ ಎಂದರು.
ಈ ಸಮಯದಲ್ಲಿ ನಾನು ನನ್ನ ಮತ ಕ್ಷೇತ್ರದಲ್ಲಿ ಇದ್ದಿದ್ದರೆ ಕೋವಿಡ್ ಕೇರ್ ಸೆಂಟರ್'ನಲ್ಲಿ ಕ್ವಾರಂಟೈನ್ ಆಗಿರುತ್ತಿದ್ದೆ. ಬೇಕಿದ್ದರೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬಹುದಿತ್ತು. ಆದ್ರೆ, ಸರ್ಕಾರದ ಹಣ ಬೇರೆಯಲ್ಲ, ನಮ್ಮ ಹಣ ಬೇರೆಯಲ್ಲ ಎಂದು ಭಾವಿಸಿ ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದೇನೆ. ಜನತೆ ಸರ್ಕಾರದ ನಿಯಮಾವಳಿ ಪಾಲಿಸಿ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು. ಇಲ್ಲವಾದರೆ ಕೋವಿಡ್ 19 ನಮ್ಮ ಜೀವಕ್ಕೆ ಮಾರಕವಾಗಲಿದೆ ಎಂಬ ಎಚ್ಚರಿಕೆಯನ್ನೂ ಶಾಸಕರು ರವಾನಿಸಿದ್ದಾರೆ.