ದಾವಣಗೆರೆ: ಕಣ್ಣಿಗೆ ಖಾರದ ಪುಡಿ ಎರಚಿ ಹಣ ಲಪಟಾಯಿಸಿದ್ದ ಗ್ಯಾಂಗ್ ಅನ್ನು ನಗರದ ವಿದ್ಯಾನಗರ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಇದೇ ತಿಂಗಳ 11ನೇ ತಾರೀಖಿನ ಮಂಗಳವಾರದಂದು ವಿದ್ಯಾನಗರ ಪೊಲೀಸ್ ಠಾಣಾ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿಯ ಸರ್ವಿಸ್ ರಸ್ತೆ ಬಳಿಯ ಪಿ ಬಸವನಗೌಡ ಬಡಾವಣೆ ಬ್ರೀಡ್ಜ್ ಹತ್ತಿರ ಘಟನೆ ನಡೆದಿತ್ತು.
ಭದ್ರಾವತಿಯ ದೇವರಾಜ್ ಎಂಬುವರು ಅಡಕೆ ಖೇಣಿ ಪಡೆದುಕೊಂಡಿದ್ದ ರೈತರಿಗೆ ಹಣ ಕೊಡಲು 20 ಲಕ್ಷ ರೂ. ನಗದನ್ನು ತನ್ನ ಸ್ನೇಹಿತನಿಂದ ಪಡೆದುಕೊಂಡು ಆಟೋದಲ್ಲಿ ಪ್ರಯಾಣಿಸುವ ವೇಳೆ ಐದು ಜನ ಅಪರಿಚಿತರು ಮಚ್ಚಿನಿಂದ ಆಟೋ ಗ್ಲಾಸ್ ಒಡೆದು ಕಣ್ಣಿಗೆ ಕಾರದ ಪುಡಿ ಎರಚಿ 20 ಲಕ್ಷ ಹಣವಿದ್ದ ಬ್ಯಾಗ್ ಅನ್ನು ದೋಚಿಕೊಂಡು ಪರಾರಿಯಾಗಿದ್ದರು. ಹಣ ಕಳೆದುಕೊಂಡ ದೇವರಾಜ್, ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಕೇಸ್ ದಾಖಲಾದ ಬೆನ್ನಲ್ಲೇ ಕಾರ್ಯಪ್ರವೃತ್ತರಾದ ಪೊಲೀಸರು ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ದಾವಣಗೆರೆ ನಗರದ ಆಂಜನೇಯ ಕಾಟನ್ ಮಿಲ್ ನಿವಾಸಿಗಳಾದ ಸನಾವುಲ್ಲಾ ಅಲಿಯಾಸ್ ಸನಾ, ಸೈಫುಲ್ಲಾ ಅಲಿಯಾಸ್ ಸೈಫು ಮತ್ತು ಕಾನೂನು ಸಂಘರ್ಷಕ್ಕೆ ಒಳಪಟ್ಟ ಬಾಲಕನನ್ನು ಪೊಲೀಸರು ಬಂಧಿಸಿದ್ದಾರೆ. ಜೊತೆಗೆ, ಬಂಧಿತರಿಂದ ದರೋಡೆ ಮಾಡಿದ್ದ 19 ಲಕ್ಷದ 80 ಸಾವಿರ ನಗದು ಮತ್ತು ಕೃತ್ಯಕ್ಕೆ ಬಳಸಿದ್ದ 1 ಲಕ್ಷ 20 ಸಾವಿರದ ಬೆಲೆಬಾಳುವ ಒಂದು ಪ್ಯಾಸೆಂಜರ್ ಆಟೋ ಮತ್ತು 2 ಲಕ್ಷ ಬೆಲೆ ಬಾಳುವ ಒಂದು ಮಹೀಂದ್ರಾ ಸುಪ್ರೋ ಪ್ಯಾಸೆಂಜರ್ ಆಟೋವನ್ನು ವಶಪಡಿಸಿಕೊಳ್ಳಲಾಗಿದೆ. ಕೇಸ್ಗೆ ಸಂಬಂಧಪಟ್ಟಂತೆ ತಲೆಮರೆಸಿಕೊಂಡಿರುವ ಇನ್ನೂ ಇಬ್ಬರು ಆರೋಪಿಗಳಿಗಾಗಿ ಶೋಧ ಮುಂದುವರೆದಿದೆ. ಪ್ರಕರಣವನ್ನು ಭೇದಿಸಿದ ವಿದ್ಯಾನಗರ ಪೊಲೀಸ್ ಠಾಣೆಯ ಸಿಬ್ಬಂದಿಗೆ ಎಪಿ ಸಿಬಿ ರಿಷ್ಯಂತ್ ಅಭಿನಂದನೆ ಸಲ್ಲಿಸಿದ್ದಾರೆ.
10 ಬೈಕ್ ವಶಕ್ಕೆ ಪಡೆದ ಪೊಲೀಸರು : ವಿಜಯನಗರದ ಹೊಸಪೇಟೆ ಪಟ್ಟಣ ಠಾಣೆ ಪೊಲೀಸರು ನಗರದ ನಾನಾ ಕಡೆ ಬೈಕ್‌ಗಳ ಕಳವು ಮಾಡುತ್ತಿದ್ದ ಆರೋಪಿಯಿಂದ 4 ಲಕ್ಷ ರೂ. ಮೌಲ್ಯದ 10 ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ. ನಗರದ ಕನಕದಾಸ ವೃತ್ತದಲ್ಲಿ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಿಸಿದಾಗ ವಿಷಯ ಬಾಯ್ಬಿಟ್ಟಿದ್ದಾನೆ. ಬಂಧಿತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಕ್ರಮ ಕೈಗೊಳ್ಳಲಾಗಿದೆ.
ಇದನ್ನೂ ಓದಿ : ಪೂಜಾರಿ ಜ್ಞಾನೇಂದ್ರ ಮೇಲೆ ಹಳೆ ವೈಷ್ಯಮ್ಯ.. ಕರಗ ಹೊರದಿರಲು ಕೆಮಿಕಲ್ಸ್ ಸುರಿದಿದ್ದ ಆರೋಪಿ ಬಂಧನ
ಹೊಸಪೇಟೆ ಡಿವೈಎಸ್ಪಿ ವಿಶ್ವನಾಥರಾವ್ ಕುಲಕರ್ಣಿ ಅವರ ಮಾರ್ಗದರ್ಶನದಲ್ಲಿ ನಗರ ಠಾಣೆ ಸಿಪಿಐ ಬಾಳನಗೌಡ, ಮಹಿಳಾ ಪಿಎಸ್ಐಗಳಾದ ಶ್ರೀಮತಿ ಶಾರದ, ಶ್ರೀಮತಿ ಪದ್ಮಾವತಿ, ಎಎಸ್ಐ ಕೋದಂಡಪಾಣಿ, ರಾಘವೇಂದ್ರ, ನಾಗರಾಜ, ಶ್ರೀರಾಮರೆಡ್ಡಿ, ದೇವೇಂದ್ರ, ಗುರುಬಸವರಾಜ, ಫಕ್ಕೀರಪ್ಪ, ಪರಶುನಾಯಕ್, ಶ್ರೀಮತಿ ದುರ್ಗಾಬಾಯಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.
ಇದನ್ನೂ ಓದಿ : ಬೆಂಗಳೂರಿನಲ್ಲಿ ₹8 ಕೋಟಿ ಮೌಲ್ಯದ ಡ್ರಗ್ಸ್ ಪತ್ತೆ: ಐವರು ವಿದೇಶಿಗರ ಬಂಧನ