ಮಂಗಳೂರು: ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ದ.ಕ. ಜಿಲ್ಲಾ ಕಾಂಗ್ರೆಸ್ ಚುನಾವಣಾ ಕಚೇರಿಯನ್ನು ಬೆಂದೂರ್ ವೆಲ್ನಲ್ಲಿರುವ ಬಾರ್ ಮತ್ತು ವೈನ್ ವ್ಯವಹಾರ ನಡೆಸುವ ವ್ಯಕ್ತಿಯೊಬ್ಬರಿಗೆ ಸೇರಿದ ನಿರ್ಮಾಣ ಹಂತದಲ್ಲಿರುವ ಕಟ್ಟಡದಲ್ಲಿ ನಿರ್ಮಿಸಲಾಗಿದೆ. ಇದು ಕಾಂಗ್ರೆಸ್ ಅಭ್ಯರ್ಥಿಯ ಸಂಸ್ಕೃತಿಯನ್ನು ಬಿಂಬಿಸುತ್ತದೆ. ಅಲ್ಲದೆ ಇದು ಕಾಂಗ್ರೆಸ್ನವರ ನೈಜ ಸಂಸ್ಕೃತಿಯನ್ನು ತೋರಿಸುತ್ತದೆ ಎಂದು ಮಂಗಳೂರು ದಕ್ಷಿಣದ ಶಾಸಕ ವೇದವ್ಯಾಸ ಕಾಮತ್ ಹೇಳಿದರು.
ನಗರದ ಬಂಟ್ಸ್ ಹಾಸ್ಟೆಲ್ನಲ್ಲಿರುವ ಬಿಜೆಪಿ ಚುನಾವಣಾ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರು ಬಿಜೆಪಿ ಸಂಸದ ನಳಿನ್ ಕುಮಾರ್ ಕಟೀಲು ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ ಹಲವು ವರ್ಷಗಳಿಂದ ಗಾಂಧಿ ಕುಟುಂಬ ಪ್ರತಿನಿಧಿಸುವ ಅಮೇಠಿ ಕ್ಷೇತ್ರದಲ್ಲಿ ಇಡೀ ದೇಶದಲ್ಲಿ ರಾಹುಲ್ ಗಾಂಧಿಗೆ ಸಿಕ್ಕಿರುವ ಸ್ಥಾನ 350ನೇ ಸ್ಥಾನ. ಕಳೆದ ಐದು ವರ್ಷಗಳಲ್ಲಿ ಬಿಜೆಪಿ ಸಂಸದ ನಳಿನ್ ಕುಮಾರ್ ದ.ಕ. ಜಿಲ್ಲೆಗೆ 16 ಸಾವಿರ 550 ಕೋಟಿ ರೂ. ತಂದಿದ್ದಾರೆ. ಆದರೆ ಅಮೇಠಿ ಕ್ಷೇತ್ರಕ್ಕೆ ರಾಹುಲ್ ಗಾಂಧಿ ಕೊಟ್ಟದ್ದು ಕೇವಲ 385 ಕೋಟಿ ರೂ. ಮಾತ್ರ. 15 ವರ್ಷಗಳಲ್ಲಿ ರಾಹುಲ್ ಗಾಂಧಿ ಅಮೇಠಿ ಕ್ಷೇತ್ರದಲ್ಲಿ ಏನು ಮಾಡಿದ್ದಾರೆ. ಅಲ್ಲದೆ ಈ ಹಿಂದೆ ಸೋನಿಯಾ ಗಾಂಧಿ, ರಾಜೀವ್ ಗಾಂಧಿಯವರು ಪ್ರತಿನಿಧಿಸಿದ ಕ್ಷೇತ್ರ ಅಮೇಠಿ. ಇಲ್ಲಿ ಯಾವ ಅಭಿವೃದ್ಧಿ ಆಗಿದೆ. ಹಾಗಾದರೆ ನಳಿನ್ ಕುಮಾರ್ ಕಟೀಲು ಅವರಿಗೆ ಕಾಂಗ್ರೆಸ್ನವರು ಮಾತನಾಡುವುದರಲ್ಲಿ ಯಾವುದೇ ಹುರುಳಿಲ್ಲ.
ಸಂಸದ ನಳಿನ್ ಕುಮಾರ್ ನಮ್ಮ ಜಿಲ್ಲೆಗೆ ಸ್ಮಾರ್ಟ್ ಸಿಟಿ ಹಾಗೂ ಅಮೃತ ಯೋಜನೆ ಎರಡನ್ನೂ ತಂದಿದ್ದಾರೆ. ಆದರೆ ಇದನ್ನು ಅನುಷ್ಠಾನಗೊಳಿಸುವಲ್ಲಿ ಕಾಂಗ್ರೆಸ್ ಆಡಳಿತವಿರುವ ಮಂಗಳೂರು ಮಹಾನಗರ ಪಾಲಿಕರ ವಿಫಲವಾಗಿದೆ. ಅಲ್ಲದೆ ನಳಿನ್ ಕುಮಾರ್ ಮೇಲೆ ವೃಥಾ ಆರೋಪವನ್ನು ಮಾಡುತ್ತಿದ್ದಾರೆ. ಅಮೇಠಿ ಮತ್ತು ಮಂಗಳೂರಿಗೆ ಹೋಲಿಕೆ ಮಾಡುವಾಗ ಅಭಿವೃದ್ಧಿಯ ದೃಷ್ಟಿಯಿಂದ ರಾಹುಲ್ ಗಾಂಧಿಗಿಂತ ನಳಿನ್ ಕುಮಾರ್ ಕಟೀಲು ಸಾವಿರ ಪಾಲು ಉತ್ತಮ ಕಾರ್ಯಗಳನ್ನು ಮಾಡಿದ್ದಾರೆ ಎಂದು ಅವರು ಹೇಳಿದರು. ರಾಹುಲ್ ಗಾಂಧಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಹಾಗೂ ಪ್ರಧಾನಿ ಅಭ್ಯರ್ಥಿ. ಈ ಕಾರಣಕ್ಕಾಗಿಯೇ ಅವರು ಉತ್ತರದಿಂದ ದಕ್ಷಿಣದಲ್ಲಿ ಅಭ್ಯರ್ಥಿಯಾಗಿ ಲೋಕಸಭಾ ಚುನಾವಣೆಯನ್ನು ಎದುರಿಸುತ್ತಿದ್ದಾರೆ.
ಆದ್ದರಿಂದಲೇ ಕಾಂಗ್ರೆಸ್ ಪಾಳಯದಲ್ಲಿ ಅಲ್ಲೋಲಕಲ್ಲೋಲವಾಗಿದೆ. ಅಲ್ಲದೆ ಚುನಾವಣೆಯಲ್ಲಿ ಎರಡು ಲಕ್ಷಕ್ಕೂ ಅಧಿಕ ಮತಗಳ ಅಂತರದಲ್ಲಿ ಸೋಲುತ್ತೇವೆ ಎಂದು ತಪ್ಪು ಮಾಹಿತಿಗಳನ್ನು ನೀಡುತ್ತಿದ್ದಾರೆ. ಆರು ತಿಂಗಳ ಹಿಂದೆ ನಮ್ಮ ಮನೆ ನಮೋ ಮನೆ ಹಾಗೂ ಕಾರುಗಳಿಗೆ ಹಾಕಿದ ಮೈ ಬೀ ಚೌಕಿದಾರ್ ಎಂಬ ಸ್ಟಿಕ್ಕರ್ಗಳನ್ನು ಕಿತ್ತು ಹಾಕುವಂತಹ ಕೆಲಸವನ್ನು ಚುನಾವಣಾ ಆಯೋಗದ ಮೂಲಕ ಕಾಂಗ್ರೆಸ್ ಮಾಡುತ್ತಿದೆ. ಇದು ಕಾಂಗ್ರೆಸ್ ಸೋಲನ್ನು ಸಂಪೂರ್ಣವಾಗಿ ಒಪ್ಪಿಕೊಂಡು ಈ ರೀತಿಯ ಚಟುವಟಿಕೆಗಳನ್ನು ಮಾಡುತ್ತಿದೆ ಎಂದು ವೇದವ್ಯಾಸ ಕಾಮತ್ ಹೇಳಿದರು.