ಮಂಗಳೂರು: ಬಿಜೆಪಿ ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರ ವಹಿಸಿ ನವೋದಯ ವಿದ್ಯಾಲಯ, ವಿಶ್ವವಿದ್ಯಾನಿಲಯ, ಶೈಕ್ಷಣಿಕ ಸಂಸ್ಥೆಗಳನ್ನು ಅಭಿವೃದ್ಧಿ ಮಾಡಿಲ್ಲ. ಅವರು ವಾಟ್ಸ್ಆ್ಯಪ್ ಯುನಿವರ್ಸಿಟಿ ಮಾಡಿದ್ದಾರೆ. ಇದು ಅವರ ಅಭಿವೃದ್ಧಿ ಎಂದು ಮಾಜಿ ಸಚಿವ ಯು.ಟಿ.ಖಾದರ್ ಲೇವಡಿ ಮಾಡಿದರು.
ನಗರದ ಸರ್ಕ್ಯೂಟ್ ಹೌಸ್ನಲ್ಲಿ ಉಳ್ಳಾಲದ ಒಂಬತ್ತು ಕೆರೆಯಲ್ಲಿ ಆಶ್ರಯ ಯೋಜನೆಯ ಮನೆಗಳ ಕಾಮಗಾರಿ ನೆನೆಗುದಿಗೆ ಬಿದ್ದಿರುವ ಬಗ್ಗೆ ಟ್ರೋಲ್ ಆಗುತ್ತಿರುವ ವಿಷಯ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಇವರ ಟ್ರೋಲ್ಗಳನ್ನು ಯಾರು ಗಣನೆಗೆ ತೆಗೆದುಕೊಳ್ಳುತ್ತಾರೆ. ಇಷ್ಟೆಲ್ಲಾ ಟ್ರೋಲ್ ಮಾಡುವ ಬಿಜೆಪಿಗರು ಒಂದು ಸಲ ಒಂಬತ್ತು ಕೆರೆಗೆ ಭೇಟಿ ಕೊಟ್ಟು ಪರಿಶೀಲನೆ ನಡೆಸಲಿ ಎಂದು ತಿರುಗೇಟು ನೀಡಿದರು.
2002ರಲ್ಲಿ ಅನುಮೋದನೆಯಾದ ಎಲ್ಲಾ 390 ಮನೆಗಳ ಕಾಮಗಾರಿಯು ರಾಜ್ಯ ಸರ್ಕಾರದ ಅಂದಿನ ನಿಯಮದಂತೆಯೇ ಸಂಪೂರ್ಣವಾಗಿ ನಿರ್ಮಾಣ ಮಾಡಲಾಗಿದೆ. ಆದರೆ ಎಲ್ಲಾ ಮನೆಗಳ ಕಾಮಗಾರಿ ಸಂಪೂರ್ಣಗೊಂಡು ವಿತರಣೆ ಮಾಡುವ ಸಂದರ್ಭದಲ್ಲಿ ಡ್ರೈನೇಜ್ ಕಾಮಗಾರಿ ಸರಿಯಾದ ವ್ಯವಸ್ಥೆಯಾಗದೆ ಅಲ್ಲಿಯೇ ಕೆಳಗೆ ಇರುವ ಒಂಬತ್ತು ಕೆರೆಯ ಧಾರ್ಮಿಕ ಕೆರೆಗೆ ತೊಂದರೆ ಸಂಭವಿಸುತ್ತದೆ ಎಂಬ ದೂರುಗಳು ಬಂದು ಅದಕ್ಕೆ ತಡೆ ಬಂತು. ಇದರಿಂದ ಈ ಮನೆಗಳ ವಿತರಣಾ ಕಾರ್ಯ ಬಾಕಿಯಾಯಿತು ಎಂದು ತಿಳಿಸಿದರು.
ಬಳಿಕ ನಾನು ವಸತಿ ಸಚಿವನಾದ ಕಾಲದಲ್ಲಿ ಮತ್ತೆ ಅದನ್ನು ಫ್ಲ್ಯಾಟ್ಗಳ ರೂಪದಲ್ಲಿ ಒಂದು ಬೆಡ್ ರೂಂನ ಮನೆಯ ಕಾಮಗಾರಿಯನ್ನು ಮಾಡಿದೆ. ಎಲ್ಲಾ ಆದ ಬಳಿಕ ಸಮ್ಮಿಶ್ರ ಸರ್ಕಾರ ಬಿದ್ದುಹೋಗಿ ಬಿಜೆಪಿ ಸರ್ಕಾರ ಬಂತು. ಆ ಪ್ಲ್ಯಾನ್ಗಳೆಲ್ಲಾ ಅವರ ಕೈಯಲ್ಲಿದೆ. ಈಗ ಅವರೇ ಅದನ್ನು ಮುಂದುವರಿಸಿಕೊಂಡು ಹೋಗಲಿ. ಈಗ ಇರೋದು ಬಿಜೆಪಿಯದ್ದೇ ಸಂಸದರು, ಅವರದೇ ವಸತಿ ಸಚಿವರಿದ್ದಾರೆ, ಮುಖ್ಯಮಂತ್ರಿಯೂ ಅವರದ್ದೇ, ಉಸ್ತುವಾರಿ ಸಚಿವರು ಅವರದ್ದೇ ಕೇಂದ್ರದಲ್ಲಿಯೂ ಅವರದ್ದೇ ಸರ್ಕಾರ, ಈಗ ಮಾಡಲಿ. ಟ್ರೋಲ್ ಮಾಡಿದಾಕ್ಷಣ ಮನೆಗಳು ನಿರ್ಮಾಣವಾಗುತ್ತಾ? ಅದು ಅವರದ್ದೇ ಜವಾಬ್ದಾರಿ ಎಂದು ಯು.ಟಿ.ಖಾದರ್ ಹೇಳಿದರು.