ಮಂಗಳೂರು: ಪಿಎಫ್ಐ ಮೇಲಿನ ದಾಳಿಯ ವಿರುದ್ಧ ರಾಜ್ಯದ, ಜಿಲ್ಲೆಗಳ ಧಾರ್ಮಿಕ ಗುರುಗಳು, ಉಲೇಮಾಗಳು ಯಾರೂ ಅಪಸ್ವರವನ್ನು ಎತ್ತಿಲ್ಲ. ಮುಸ್ಲಿಂ ಧರ್ಮದ ಸಹಿತ ಎಲ್ಲ ಧರ್ಮಗಳು ನ್ಯಾಯಯುತ ತನಿಖೆಗೆ ಬೆಂಬಲ ಕೊಡುತ್ತಾರೆ ಎಂದು ವಿಧಾನಸಭೆಯ ವಿಪಕ್ಷ ಉಪ ನಾಯಕ ಯು. ಟಿ ಖಾದರ್ ಹೇಳಿದರು.
ಮಂಗಳೂರಿನಲ್ಲಿ ಮಾತನಾಡಿದ ಅವರು, ಯಾವ ಸಂಘಟನೆಗಳನ್ನು ಬ್ಯಾನ್ ಮಾಡಬೇಕು, ಇನ್ನೇನು ಮಾಡಬೇಕೆಂಬುದು ತನಿಖೆಯ ಆಧಾರದಲ್ಲಿ ತಿಳಿಯುವಂತದ್ದು. ಸಮಾಜದಲ್ಲಿ ಅಶಾಂತಿ ಹುಟ್ಟುವ, ದ್ವೇಷ ಆಧಾರಿತ ಕೃತ್ಯ ನಡೆಯುತ್ತಿದ್ದರೆ ಎಲ್ಲ ಸಂಘಟನೆಗಳಿಗೆ ಸಮಾನವಾದ ಕಾನೂನುಗಳನ್ನು ತನ್ನಿ. ಇದರಿಂದ ರಾಷ್ಟ್ರದಲ್ಲಿ ನ್ಯಾಯ, ತಾರತಮ್ಯ ರಹಿತವಾದ ಸಮಾಜ ಅಥವಾ ಆಡಳಿತಕ್ಕೆ ಎಲ್ಲರೂ ಬೆಂಬಲ ಕೊಡುತ್ತಾರೆ ಎಂದು ಹೇಳಿದರು.
ಸಮಾಜದಲ್ಲಿ ಅಶಾಂತಿ, ದ್ವೇಷದ ವಾತಾವರಣ, ಹಲ್ಲೆ, ಹತ್ಯೆಯ ಪರಿಸ್ಥಿತಿ ನಿರ್ಮಾಣವಾಗುತ್ತಿದ್ದರೆ ಅಂತಹ ಘಟನೆಗಳ ವಿರುದ್ಧ ಕ್ರಮ ತೆಗೆದುಕೊಳ್ಳಲು ಎಲ್ಲರ ಸಮ್ಮತಿ ಇರುತ್ತದೆ. ಶಾಂತಿ, ಸುವ್ಯವಸ್ಥೆಯ ವಾತಾವರಣ ನಿರ್ಮಾಣ ಮಾಡುವುದು, ಕಾನೂನು ಕೈಗೆತ್ತಿಕೊಳ್ಳುವವರನ್ನು ಹದ್ದು ಬಸ್ತಿನಲ್ಲಿಡುವುದು ಸರ್ಕಾರದ ಜವಾಬ್ದಾರಿಗಳಾಗಿವೆ. ಅಲ್ಲದೇ, ಯಾವುದೇ ತಾರತಮ್ಯವಿಲ್ಲದೆ ಎಲ್ಲರಿಗೂ ಒಂದೇ ರೀತಿಯ ನ್ಯಾಯ ಕೊಡುವ ಕಾರ್ಯವನ್ನು ಸರ್ಕಾರ ಮಾಡಬೇಕು ಎಂದು ಇದೇ ವೇಳೆ ಕಾಂಗ್ರೆಸ್ ನಾಯಕ ಖಾದರ್ ಒತ್ತಾಯಿಸಿದರು.
ಓದಿ: ನಿಷೇಧಿತ ಸಂಘಟನೆ ಸಿಮಿ ಹುಟ್ಟಿದ್ದು ವಿಜಯಪುರದಲ್ಲಿ, ಅದರ ಪ್ರತಿರೂಪ ಪಿಎಫ್ಐ, ಎಸ್ಡಿಪಿಐ: ಯತ್ನಾಳ್