ಬೆಳ್ತಂಗಡಿ (ದ.ಕ): ಮಳೆಗಾಲದಲ್ಲಿ ತಾಲೂಕಿನ ಮಲವಂತಿಗೆ ಹಾಗೂ ಮಿತ್ತಬಾಗಿಲು ಗ್ರಾಮ ಪಂಚಾಯಿತಿಗಳ ಗಡಿಭಾಗದಲ್ಲಿರುವ ಈ ಪ್ರದೇಶಗಳ ಪರಿಸ್ಥಿತಿ ಹೇಳತೀರದಾಗಿದೆ. ಎರ್ಮಾಯಿ, ಪರ್ಲ, ಮಕ್ಕಿ, ಬದನಾಜೆ, ಪಾಡಿ, ದೈಪಿತ್ತಿಲು, ಎಲ್ಯರಕಂಡ, ಬೈಲು, ಬುಡಲ ಹಾಗೂ ಇನ್ನಿತರ ಸುಮಾರು 40 ರಿಂದ 50 ಮನೆಗಳು ಕಲ್ಲಂಡ ಎಂಬಲ್ಲಿ ಹರಿಯುವ ಹಳ್ಳದಿಂದಾಗಿ ದ್ವೀಪದಂತಾಗುತ್ತದೆ.
ಈ ಹಳ್ಳ ದಾಟಲು ಯಾವುದೇ ರೀತಿಯ ಸೇತುವೆ ಇಲ್ಲದೇ ಇರುವುದು ಇದಕ್ಕೆಲ್ಲ ಕಾರಣ. ಹಲವು ವರ್ಷಗಳಿಂದ ಈ ಪ್ರದೇಶದ ಜನರು ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಮನವಿ ಮಾಡಿದರೂ ಯಾವುದೇ ಉಪಯೋಗಿಲ್ಲ. ಕಳೆದ ಭಾರಿ ಅಗಸ್ಟ್ ತಿಂಗಳಲ್ಲಿ ಸುರಿದ ಭಾರಿ ಮಳೆಗೆ ನೆರೆ ಬಂದು ಹಳ್ಳದ ಮಣ್ಣೆಲ್ಲ ಕೊಚ್ಚಿ ಹೋಗಿ ನದಿಯಷ್ಟು ಅಗಲವಾಗಿದ್ದು, ಕೃಷಿ ಭೂಮಿ ಸರ್ವನಾಶವಾಗಿದೆ.
ಕಳೆದ ವರ್ಷದ ನೆರೆ ಸಂದರ್ಭದಲ್ಲಿ ಹೇಗೋ ನಮ್ಮ ಪ್ರಾಣವನ್ನು ಉಳಿಸಿಕೊಂಡಿದ್ದೇವೆ. ಪ್ರತೀ ವರ್ಷ ಈ ಹಳ್ಳಕ್ಕೆ ನಾವೆಲ್ಲ ಸ್ಥಳೀಯರು ಸೇರಿ ತಾತ್ಕಾಲಿಕ ಅಡಿಕೆ ಮರದ ಸೇತುವೆ ನಿರ್ಮಿಸುತ್ತಿದ್ದೆವು. ಅದರೆ ಈ ಬಾರಿ ಯಾವ ರೀತಿಯಲ್ಲೂ ಮಳೆಗಾಲದಲ್ಲಿ ಹಳ್ಳವನ್ನು ದಾಟದಂತಹ ಸ್ಥಿತಿ ನಿರ್ಮಾಣವಾಗಿದೆ. ಕಾರಣ ಕಳೆದ ಸಲ ಬಂದಿರುವ ನೆರೆಯಿಂದ ಹಳ್ಳದ ಬದಿಯ ಮಣ್ಣೆಲ್ಲ ಹೋಗಿದ್ದು, ತಾತ್ಕಾಲಿಕ ಸೇತುವೆ ನಿರ್ಮಿಸುವುದಕ್ಕೂ ಸಾಧ್ಯವಿಲ್ಲದ ಪರಿಸ್ಥಿತಿ ಉದ್ಭವಿಸಿದೆ.
ಹಲವು ವರ್ಷಗಳಿಂದ ಸೇತುವೆ ನಿರ್ಮಾಣ ಮಾಡಿ ಬೆಡಿಕೆ ಇಟ್ಟರೂ ಈ ಬಗ್ಗೆ ಯಾರೂ ಗಮನ ಹರಿಸಿಲ್ಲ. ಆದರೆ ಈ ಸಲ ನಾವು ನಮ್ಮ ಅತಂಕವನ್ನು ಶಾಸಕ ಹರೀಶ್ ಪೂಂಜರ ಗಮನಕ್ಕೆ ತಂದಿದ್ದೇವೆ. ಅವರು ಸೂಕ್ತವಾಗಿ ಸ್ಪಂದಿಸಿ ಸೇತುವೆಯ ಭರವಸೆ ನೀಡಿದ್ದಾರೆ ಎನ್ನುತ್ತಾರೆ ಸ್ಥಳೀಯ ನಿವಾಸಿಗಳು.