ಬಂಟ್ವಾಳ(ದಕ್ಷಿಣ ಕನ್ನಡ) : ತಾಲೂಕಿನ ಮಜಿ ಎಂಬಲ್ಲಿ 6 ಅಡಿ ಆಳದ ಬಾವಿಗೆ ಬಿದ್ದಿದ್ದ ಚಿರತೆ ಮರಿಯೊಂದನ್ನು ಅರಣ್ಯ ಇಲಾಖೆ ಸಿಬ್ಬಂದಿ, ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ ಪೊಲೀಸರು ಕಾರ್ಯಾಚರಣೆ ನಡೆಸಿ ಹೊರತೆಗೆದಿದ್ದಾರೆ.
ರಾತ್ರಿ ವೇಳೆ ಆಹಾರ ಹುಡುಕುತ್ತಾ ಗ್ರಾಮಕ್ಕೆ ಬಂದಿರುವ ಚಿರತೆ ಕತ್ತಲಲ್ಲಿ ಕಾಣದೆ ಬಾವಿಗೆ ಬಿದ್ದಿರಬಹುದು ಎನ್ನಲಾಗಿದೆ. ಮಜಿ ಮೋನಪ್ಪ ಎಂಬುವವರ ಜಮೀನಿಗೆ ಸೇರಿದ ಬಾವಿ ಇದಾಗಿದೆ. ಬಾವಿಯಲ್ಲಿ ಚಿರತೆ ಇರುವುದನ್ನು ನೋಡಿದವರು ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ಕೂಡಲೇ ಕಾರ್ಯಪ್ರವೃತ್ತರಾದ ಅರಣ್ಯ ಇಲಾಖೆ ಸಿಬ್ಬಂದಿ, ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರೊಂದಿಗೆ ಕಾರ್ಯಾಚರಣೆ ನಡೆಸಿ ಚಿರತೆಯನ್ನು ಸುರಕ್ಷಿತವಾಗಿ ಮೇಲೆ ಎತ್ತಿ ಮತ್ತೆ ಅರಣ್ಯಕ್ಕೆ ಸೇರಿಸಿದ್ದಾರೆ. ಇದು 2 ವರ್ಷದ ಚಿರತೆ ಮರಿ ಎಂದು ಪರೀಕ್ಷೆ ನಡೆಸಿದ ವೈದ್ಯರು ತಿಳಿಸಿದ್ದಾರೆ.
ವಲಯ ಅರಣ್ಯಾಧಿಕಾರಿ ಶ್ರೀಧರ್, ಪ್ರೀತಂ, ಜಿತೇಶ್, ಭಾಸ್ಕರ್, ವಿನಯ್, ಬಂಟ್ವಾಳ ಗ್ರಾಮಾಂತರ ಎಸ್ಐ ಪ್ರಸನ್ನ, ಟ್ರಾಫಿಕ್ ಎಸ್ಐ ರಾಜೇಶ್ ಅರಣ್ಯ ಇಲಾಖೆ ಸಿಬ್ಬಂದಿ ಜನಾರ್ಧನ, ಕಿರಣ್ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.