ಮಂಗಳೂರು: ಪ್ರಾದೇಶಿಕ ಭಾಷೆಗಳ ಮೇಲೆ ಹಿಂದಿ ಹೇರಿಕೆಯಾದರೆ ತೊಂದರೆಯಿಲ್ಲ. ಯಾಕೆಂದರೆ ಎಲ್ಲದರ ಧರ್ಮಸಂಸ್ಕೃತಿ ಜೀವನ ಮೌಲ್ಯಗಳು ಅದರಲ್ಲಿರುತ್ತವೆ. ಆದರೆ ಇಂಗ್ಲಿಷ್ ಭಾರತಕ್ಕೆ ಆಗಮನವಾದದ್ದೇ ನಮ್ಮ ದೇಶಕ್ಕೆ ಸಮಸ್ಯೆಯಾಯಿತು ಎಂದು ಆರ್ ಎಸ್ಎಸ್ ಮುಖಂಡ ಡಾ.ಕಲ್ಲಡ್ಕ ಪ್ರಭಾಕರ ಭಟ್ ಹೇಳಿದ್ದಾರೆ.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ನೂತನ ಅಧ್ಯಕ್ಷ ದಯಾನಂದ ಕತ್ತಲ್ ಸಾರ್ ಅವರ ಪದಗ್ರಹಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇಂಗ್ಲಿಷ್ ಮಾಧ್ಯಮ ಶಾಲೆಗೆ ಮಕ್ಕಳನ್ನು ಕಳುಹಿಸಬೇಡಿ ಎಂದು ನಾನು ಹೇಳುವುದಿಲ್ಲ. ಆದರೆ ಮನೆಯಲ್ಲಿ ನಮ್ಮ ಮಾತೃಭಾಷೆಯನ್ನೇ ಮಾತನಾಡಿ. ನಮ್ಮ ಮಣ್ಣಿನ ಭಾಷೆ ತುಳು. ಹಾಗಾಗಿ ನಾವು ತುಳು ಭಾಷೆಯನ್ನು ಉಳಿಸಿ, ಬೆಳೆಸುವ ಎಂದು ಹೇಳಿದರು.
ನಮ್ಮ ದೇಶದಲ್ಲಿ ಒಂದೊಂದು ಪ್ರದೇಶದಲ್ಲಿ ಒಂದೊಂದು ಭಾಷೆಗಳಿವೆ. ದುರ್ದೈವವೆಂದರೆ ಬ್ರಿಟಿಷರು ಬಂದ ಬಳಿಕ ಇಡೀ ದೇಶದಲ್ಲಿ ಒಂದೇ ಭಾಷೆ ಇರಬೇಕೆಂದು ಅವರು ಪ್ರಯತ್ನ ಪಟ್ಟರು. ಪರಿಣಾಮ ನಮ್ಮ ಸಂಸ್ಕೃತಿಯನ್ನು ಬೆಳೆಸುವ, ಜೀವನ ಮೌಲ್ಯಗಳನ್ನು ಉಳಿಸುವ, ಧರ್ಮವನ್ನು ಉಳಿಸುವ ಕೆಲಸಗಳು ಹಿಂದೆ ಉಳಿಯಿತು. ನಮ್ಮ ಇಡೀ ದೇಶದ ಸಂಸ್ಕೃತಿ ಒಂದೇ ಆಗಿರಬಹುದು. ಆದರೆ ಸಂಪ್ರದಾಯ, ಆಚಾರ-ವಿಚಾರಗಳು ಬೇರೆ ಬೇರೆಯಾಗಿದೆ. ಅದನ್ನು ಬೆಳೆಸಬೇಕಾದರೆ ಆಯಾಯಾ ಭಾಷೆಗಳನ್ನು ಉಳಿಸಬೇಕು ಎಂದರು.
ಈ ಸಂದರ್ಭ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಪ್ರಕಟಿತ ಎಂಟು ಪುಸ್ತಕಗಳನ್ನು ಡಾ.ಕಲ್ಲಡ್ಕ ಪ್ರಭಾಕರ ಭಟ್ಅನಾವರಣಗೊಳಿಸಿದರು. ಕಾರ್ಯಕ್ರಮದಲ್ಲಿ ಶಾಸಕರಾದ ಉಮಾನಾಥ ಕೋಟ್ಯಾನ್, ರಾಜೇಶ್ ನಾಯ್ಕ್, ಹಿರಿಯ ಸಾಹಿತಿ ವಾಮನ ನಂದಾವರ, ದ.ಕ.ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಮತ್ತಿತರರು ಉಪಸ್ಥಿತರಿದ್ದರು.