ಪುತ್ತೂರು (ದಕ್ಷಿಣ ಕನ್ನಡ): ಭಾರತೀಯ ಜನತಾ ಪಕ್ಷ ರಾಜಕಾರಣ ಕಾರ್ಯಾಲಯ ಅಲ್ಲ, ಜನಸೇವೆ ಕಾರ್ಯಾಲಯ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.
ನಗರದ ಟೌನ್ ಬ್ಯಾಂಕ್ ಸಭಾಂಗಣದಲ್ಲಿ ಪ್ರಧಾನಿ ಮೋದಿ ಅವರ ಜನ್ಮದಿನ ಪ್ರಯುಕ್ತ ಬಿಜೆಪಿ ಹಿಂದುಳಿದ ವರ್ಗ ಮೋರ್ಚಾ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಸೇವಾ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ಭಾರತ ಜಗತ್ತಿನ ಗುರುವಾಗಬೇಕು ಎಂಬುದು ಮೋದಿ ಅವರ ಕಲ್ಪನೆಯಾಗಿದೆ. ಈ ನಿಟ್ಟಿನಲ್ಲಿ ಭ್ರಷ್ಟಾಚಾರ ರಹಿತ ಆಡಳಿತ, ಏಕರೂಪದ ತೆರಿಗೆ ಜಿಎಸ್‌ಟಿ ಮೂಲಕ ದೇಶದ ಸರ್ವಾಂಗೀಣ ಅಭಿವೃದ್ಧಿಗೆ ತಮ್ಮನ್ನು ಸಮರ್ಪಿಸಿಕೊಂಡಿದ್ದಾರೆ ಎಂದರು.
ಸ್ವದೇಶಿ ವಸ್ತುಗಳ ಬಳಕೆಗೆ ಒತ್ತು ನೀಡಿ, ಆತ್ಮನಿರ್ಭರ ಭಾರತ ನಿರ್ಮಾಣ ಹಾಗೂ 35 ಕೋಟಿ ಜನರಿಗೆ ಜನಧನ್ ಖಾತೆ ಮೂಲಕ ಸರ್ಕಾರದ ಸವಲತ್ತುಗಳು ನೇರವಾಗಿ ತಲುಪ ವ್ಯವಸ್ಥೆ ಮಾಡಲಾಗಿದೆ. ಉಜ್ವಲ ಯೋಜನೆ ಅಡಿ 5 ಕೋಟಿ ಮಹಿಳೆಯರಿಗೆ ಉಚಿತ ಗ್ಯಾಸ್ ವಿತರಣೆ, ಕಟ್ಟಕಡೆಯ ವ್ಯಕ್ತಿಗೂ ಆಯುಷ್ಮಾನ್ ಯೋಜನೆ, ಮನ್ ಕೀ ಬಾತ್ ಜನರ ಮನಸ್ಸನ್ನು ಮುಟ್ಟುವ ಕೆಲಸ ಮಾಡಿದ್ದಾರೆ ಎಂದರು.
ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಎಲ್ಲ ಸ್ಥಾನಗಳನ್ನು ಬಿಜೆಪಿ ಗಳಿಸುಕೊಂಡು ಕಾಂಗ್ರೆಸ್ ಮುಕ್ತ ಗ್ರಾಮ ಪಂಚಾಯಿತಿ ಮಾಡಲಾಗುವುದು. ಇದಕ್ಕಾಗಿ ಎಲ್ಲರ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಜಿಲ್ಲಾ ಅಧ್ಯಕ್ಷ ಸುದರ್ಶನ ಮೂಡಬಿದ್ರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಮಾತನಾಡಿ, ಜಾಗತಿಕ ಮಟ್ಟದ ಪ್ರಭಾವಿ ವ್ಯಕ್ತಿ ಪ್ರಧಾನಿ ನರೇಂದ್ರ ಮೋದಿ ಆಗಿದ್ದಾರೆ. ಕೇವಲ ರಾಜಕೀಯ ಉದ್ದೇಶಕ್ಕಾಗಿ ಆಡಳಿತ ಮಾಡದೇ ಸಮಾಜ ಪರಿವರ್ತನೆಗೆ ಮುಂದಾಗಿದ್ದಾರೆ. ಈ ನಿಟ್ಟಿನಲ್ಲಿ ಸೇವಾ ಕಾರ್ಯದ ಮೂಲಕ ಅವರ ಹುಟ್ಟುಹಬ್ಬ ಆಚರಣೆ ಅರ್ಥಪೂರ್ಣವಾಗಿದೆ ಎಂದರು.
ಹಿರಿಯ ಮುಖಂಡ ಕೇಶವ ಎಂ.ಎಸ್. ಕುಂಬ್ರ, ಸದಾಶಿವ ಭಂಡಾರಿ ಸರ್ವೆ, ಕಿನ್ನು ಮೂಲ್ಯ, ಗೋಪಾಲಕೃಷ್ಣ ಆಚಾರ್ಯ ಹಾಗೂ ಪುತ್ತೂರಲ್ಲಿ ಸುಮಾರು ನಾಲ್ಕು ಸಾವಿರ ಶವ ಸಂಸ್ಕಾರ ಮಾಡಿ, ಸಮಾಜ ಸೇವೆಗೈದ ಸತೀಶ್ ಮಡಿವಾಳ ಅವರನ್ನು ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ ಮೂಡಬಿದ್ರಿ ಸನ್ಮಾನಿಸಿದರು.
ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಮಂಗಳೂರು ವಿಭಾಗದ ಸಹ ಪ್ರಭಾರಿ ಗೋಪಾಲಕೃಷ್ಣ ಹೇರಳೆ, ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ಜಿಲ್ಲಾಧ್ಯಕ್ಷ ಆರ್.ಸಿ.ನಾರಾಯಣ, ಸುನೀಲ್ ದಡ್ಡು, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ರಾಧಾಕೃಷ್ಣ ರೈ ಬೂಡಿಯಾರ್, ಪ್ರಧಾನ ಕಾರ್ಯದರ್ಶಿ ಸುಧೀರ್ ಕಣ್ಣೂರು, ಕಸ್ತೂರಿ ಪಂಜ, ಜಯಂತಿ ನಾಯಕ್ ಇದ್ದರು.