ಮಂಗಳೂರು: ನೇತ್ರಾವತಿ ನದಿಯು ಪ್ರವಾಹದ ರೀತಿ ಉಕ್ಕಿ ಹರಿಯುತ್ತಿರುವುದರಿಂದ ಕಾಂಗ್ರೆಸ್ ಹಿರಿಯ ಮುಖಂಡ ಜನಾರ್ದನ ಪೂಜಾರಿಯವರ ಮನೆ ಜಲಾವೃತಗೊಂಡಿದ್ದು, ಶ್ರೀಕ್ಷೇತ್ರ ಕುದ್ರೋಳಿಯಲ್ಲಿ ವಾಸ್ತವ್ಯ ಹೂಡಿದ್ದಾರೆ.
ನಿನ್ನೆಯಿಂದ ಗಾಳಿ ಸಹಿತ ಮಳೆ ಮತ್ತಷ್ಟು ಬಿರುಸುಗೊಂಡಿದ್ದು, ನೇತ್ರಾವತಿ ನದಿ ರಾತ್ರಿ ವೇಳೆಗೆ 31.5 ಮೀಟರ್ ಅಪಾಯದ ಮಟ್ಟ ಮೀರಿ ಹರಿಯುತ್ತಿತ್ತು. ಪರಿಣಾಮ ಬಂಟ್ವಾಳ ಪೇಟೆ ಪೂರ್ತಿಯಾಗಿ ಜಲಾವೃತಗೊಂಡಿದೆ. ಏಕಾಏಕಿ ನೀರು ಏರಿದ ಪರಿಣಾಮ ನದಿ ಹತ್ತಿರದ ಮನೆಯ ಕಾಂಪೌಂಡ್, ಮನೆಯೊಳಗೂ ನೀರು ನುಗ್ಗಿದೆ.
ಮುನ್ನೆಚ್ಚರಿಕಾ ದೃಷ್ಟಿಯಿಂದ ನದಿ ಬಳಿ ಇರುವ ಹಾಗೂ ಜಲಾವೃತಗೊಂಡ ಪ್ರದೇಶಗಳ ಮನೆ ಮಂದಿಯನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಜನಾರ್ದನ ಪೂಜಾರಿಯವರು ಮನೆಯಿಂದ ಸ್ಥಳಾಂತರಗೊಂಡಿದ್ದು, ಮಂಗಳೂರಿನ ಶ್ರೀಕ್ಷೇತ್ರ ಕುದ್ರೋಳಿಯಲ್ಲಿ ವಾಸ್ತವ್ಯ ಹೂಡಿದ್ದಾರೆ.