ಮಂಗಳೂರು (ದ.ಕ): ಸಹೋದರತೆಯ ಹಬ್ಬ ರಕ್ಷಾ ಬಂಧನ ಈ ಬಾರಿ ಆಗಸ್ಟ್ 3ರಂದು ಆಚರಣೆಗೆ ಸಿದ್ಧವಾಗಿದೆ. ಈ ಬಾರಿಯ ಹಬ್ಬಕ್ಕೆ ಕೊರೊನಾ ಭೀತಿ ಸಹ ಇದ್ದು, ಜಾಗೃತಿ ಮೂಡಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಈ ನಡುವೆ ಈ ವರ್ಷದ ರಕ್ಷಾ ಬಂಧನವನ್ನು ಪರಿಸರ ಪ್ರೇಮಿಯಾಗಿ ಆಚರಿಸಲು ಮಂಗಳೂರಿನ ಕಲಾವಿದರೊಬ್ಬರು ಪಣತೊಟ್ಟಿದ್ದಾರೆ.
ಇದಕ್ಕಾಗಿ ಇವರು ವಿಶೇಷ ಹಾಗೂ ವಿಭಿನ್ನ ರೀತಿಯ ರಾಖಿಗಳನ್ನು ತಯಾರಿಸಿದ್ದಾರೆ. ಈ ರಾಖಿಗಳ ವಿಶೇಷತೆ ಏನೆಂದರೆ. ಇವು ತರಕಾರಿ ಬೀಜಗಳಿಂದ ಮಾಡಲ್ಪಟ್ಟಿದ್ದು, ರಕ್ಷಾ ಬಂಧನದ ಜೊತೆಗೆ ಪರಿಸರ ಬಂಧನವೂ ಏರ್ಪಡಲಿದೆ.
ರಾಖಿ ನಿರ್ಮಾಣದಲ್ಲಿ ಚೀನಾ ದೇಶದ ಪ್ರಾಬಲ್ಯ ಇದೆ. ಈ ಬಾರಿ ಚೀನಿ ರಾಖಿಯ ಬದಲಿಗೆ ದೇಸಿ ರಾಖಿಯತ್ತ ಜನ ಒಲವು ತೋರುತ್ತಿದ್ದಾರೆ. ಮಂಗಳೂರಿನ ಪರಿಸರ ಪ್ರೇಮಿ, ಕಲಾವಿದ ನಿತಿನ್ ವಾಸ್ ಅವರು ಈ ಬಾರಿ ವಿಶೇಷವಾದ ರಾಖಿಯನ್ನು ಮಾರುಕಟ್ಟೆಗೆ ಪರಿಚಯಿಸಿದ್ದಾರೆ.
ತಮ್ಮ ಪೇಪರ್ ಸೀಡ್ ಸಂಸ್ಥೆಯಿಂದ ಈ ಬಾರಿ ರಾಖಿಯಲ್ಲಿ ತರಕಾರಿ ಗಿಡಗಳು ಬೆಳೆಯುವಂತಹ ವ್ಯವಸ್ಥೆ ಮಾಡಿದ್ದಾರೆ. ಇವರು ನಿರ್ಮಿಸಿದ ರಾಖಿಯ ಒಳಗೆ ತರಕಾರಿ ಗಿಡದ ಬೀಜಗಳನ್ನು ಹಾಕಲಾಗಿದೆ. ಈ ರಾಖಿಯನ್ನು ಬಳಸಿ ಎಸೆದಾಗ ಅಥವಾ ಮಣ್ಣಿನಲ್ಲಿ ಹಾಕಿದಾಗ ತರಕಾರಿ ಗಿಡಗಳು ಬೆಳೆಯುತ್ತದೆ. ಟೊಮೆಟೊ, ಸೌತೆಕಾಯಿ ಮೊದಲಾದ ತರಕಾರಿ ಬೀಜಗಳನ್ನು ಇದರಲ್ಲಿ ಹಾಕಿ ರಾಖಿಯನ್ನು ನಿರ್ಮಿಸಲಾಗಿದೆ.
ತರಕಾರಿ ಗಿಡಗಳ ಬೀಜಗಳನ್ನು ಹಾಕಿ ಈಗಾಗಲೇ ಹಲವು ವಸ್ತುಗಳನ್ನು ತಯಾರಿಸಿರುವ ಇವರು, ಈ ಬಾರಿ ರಾಖಿಯನ್ನು ನಿರ್ಮಿಸಿದ್ದಾರೆ. ತರಕಾರಿ ಬೀಜದ ಸಾವಿರದಷ್ಟು ರಾಖಿಗಳನ್ನು ಇವರು ತಯಾರಿಸಿದ್ದಾರೆ.
ಈ ಬಾರಿ ಕೊರೊನಾ ಕಾರಣದಿಂದ ಮಾರುಕಟ್ಟೆ ಸಮಸ್ಯೆ ಇದ್ದು ಇದಕ್ಕಾಗಿ ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ಪಡಿಸಿ ದೇಶಾದ್ಯಂತ ಕಳುಹಿಸುತ್ತಿದ್ದಾರೆ. ಈ ಮೂಲಕ ಸಾರ್ವಜನಿಕರ ಶ್ಲಾಘನೆಗೂ ಪಾತ್ರರಾಗಿದ್ದಾರೆ.