ಬೆಳ್ತಂಗಡಿ: ಕೊರೊನಾ ಸೋಂಕಿನಿಂದ ಮೃತಪಟ್ಟ ವ್ಯಕ್ತಿಯ ಅಂತ್ಯಸಂಸ್ಕಾರವನ್ನು ಹಿಂದೂ ಸಂಪ್ರದಾಯದಂತೆ ಬೆಳ್ತಂಗಡಿಯ ರಾಜಕೇಸರಿ ಸಂಘಟನೆಯವರು ನೆರವೇರಿಸಿದರು.
ಪರಸಪ್ಪ ಛಲವಾದಿ (42) ಮೃತ ವ್ಯಕ್ತಿ. ಮೂಲತಃ ವಿಜಯಪುರದವರಾದ ಇವರು ಧರ್ಮಸ್ಥಳ ಕೆಎಸ್‌ಆರ್‌ಟಿಸಿ ಡಿಪೋದಲ್ಲಿ ಮೆಕ್ಯಾನಿಕ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಅನಾರೋಗ್ಯದಿಂದ ಬಳಲುತ್ತಿದ್ದ ಇವರಿಗೆ ಕೊರೊನಾ ಸೋಂಕು ತಗಲಿತ್ತು. ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಸಾವನ್ನಪ್ಪಿದ್ದಾರೆ. ಬಾಡಿಗೆ ಮನೆಯಲ್ಲಿ ವಾಸವಾಗಿರುವ ಇವರಿಗೆ ಪತ್ನಿ ಹಾಗೂ ಮೂವರು ಮಕ್ಕಳಿದ್ದಾರೆ.
ಹಲವು ಸಮಾಜಮುಖಿ ಕೆಲಸಗಳನ್ನು ಮಾಡುತ್ತಾ ಗಮನ ಸೆಳೆದಿರುವ ರಾಜಕೇಸರಿ ಸಂಘಟನೆ ಅಶಕ್ತ ಕುಟುಂಬಗಳಿಗೆ ಆರೋಗ್ಯ ನೆರವು, ಮನೆ ಇಲ್ಲದ ನಿರ್ಗತಿಕರಿಗೆ ಮನೆ ನಿರ್ಮಾಣ, ರಕ್ತದಾನ ಶಿಬಿರ ಹಾಗೂ ಇನ್ನಿತರ ಸಮಾಜ ಸೇವೆಗಳ ಮೂಲಕ ಹೆಸರುವಾಸಿಯಾಗಿದೆ. ಕಳೆದ ಲಾಕ್‌ಡೌನ್ ಸಮಯದಲ್ಲಿಯೂ ಕೊರೊನಾ ವಾರಿಯರ್ಸ್‌ಗಳಾಗಿ ಕರ್ತವ್ಯ ನಿರ್ವಹಿಸಿದ ಇವರ ಸೇವೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಸಂಘಟನೆಯ ಸಂಸ್ಥಾಪಕ ದೀಪಕ್ ಜಿ., ತಾಲೂಕು ಅಧ್ಯಕ್ಷ ಕಾರ್ತಿಕ್, ಸದಸ್ಯರುಗಳಾದ ಲೋಹಿತ್, ರಾಜೇಶ್ ಕೋವಿಡ್ ನಿಯಮ ಪಾಲಿಸಿ ಅಂತ್ಯಕ್ರಿಯೆ ನೆರವೇರಿಸಿದರು.