ಮಂಗಳೂರು: 30 ಅಡಿ ಎತ್ತರದ ತೊಟ್ಟಿಗೆ ಬಿದ್ದ ನವಿಲನ್ನು ರಕ್ಷಿಸಿರುವ ಘಟನೆ ಮೂಡುಬಿದಿರೆ ಜೈನಮಠದ ರಮಾರಾಣಿ ಶೋಧ ಸಂಸ್ಥಾನದ ಬಳಿ ನಡೆದಿದೆ.
ಮಧ್ಯಾಹ್ನ 2ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಶ್ರೀ ಮಠದ ಅಡುಗೆಯವರಾದ ಮಹಾವೀರ್ ಹಾಗೂ ರತ್ನ ಕುಮಾರ್ ಜೈನ್ ಗಮನಿಸಿ ಮೂಡುಬಿದಿರೆಯ ಶ್ರೀ ಚಾರುಕೀರ್ತಿ ಭಟ್ಟಾರಕರ ಗಮನಕ್ಕೆ ತಂದಿದ್ದಾರೆ. ತಕ್ಷಣ ಶ್ರೀಗಳು ಮಾಜಿ ಸಚಿವ ಅಭಯ ಚಂದ್ರ ಜೈನ್ ಹಾಗೂ ಮೂಡುಬಿದಿರೆ ವಲಯ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.
ಅರಣ್ಯ ಅಧಿಕಾರಿ ಪ್ರಕಾಶ್ ಕಾರ್ಯ ಪ್ರವೃತ್ತರಾಗಿ ತಮ್ಮ ಸಿಬ್ಬಂದಿ ಬಸವರಾಜ್ ಫಾರೆಸ್ಟ್ ಗಾರ್ಡ್ ಸುಧಾಕರ್, ಮೂಡುಬಿದಿರೆಯ ಧೀರಜ್, ರಫೀಕ್ ಮತ್ತಿತರರು ತೊಟ್ಟಿಗೆ ಬಿದ್ದು ಒದ್ದಾಡುತ್ತಿದ್ದ ನವಿಲನ್ನು 15ನಿಮಿಷಗಳ ಕಾರ್ಯಚರಣೆ ನಡೆಸಿ ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ. ಅರಣ್ಯ ಇಲಾಖೆಯ ಅಧಿಕಾರಿಗಳು ನವಿಲನ್ನು ತಮ್ಮ ಕಚೇರಿಗೆ ತೆಗೆದುಕೊಂಡು ಹೋಗಿ ಪ್ರಥಮ ಚಿಕಿತ್ಸೆ ನೀಡಿದ್ದಾರೆ.