ಮಂಗಳೂರು: ನಟೋರಿಯಸ್ ರೌಡಿ ಆಕಾಶ ಭವನ್ ಶರಣ್ ಕಾಲಿಗೆ ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದಾರೆ. ಕೆವಿಜಿ ಮೆಡಿಕಲ್ ಕಾಲೇಜು ಆಡಳಿತಾಧಿಕಾರಿ ರಾಮಕೃಷ್ಣ ಕೊಲೆ ಪ್ರಕರಣದಲ್ಲಿ ಆಕಾಶ್ ಭವನ್ ಶರಣ್ ಪ್ರಮುಖ ಆರೋಪಿಯಾಗಿದ್ದು, ವಿಚಾರಣೆಗೆ ಹಾಜರಾಗದೇ ತಪ್ಪಿಸಿಕೊಂಡಿದ್ದ. ಇತ್ತೀಚೆಗೆ ಈತನನ್ನು ಬಂಧಿಸುವ ವೇಳೆ ಪೊಲೀಸರ ಮೇಲೆ ಕಾರು ಹರಿಸಲು ಯತ್ನಿಸಿ ತಪ್ಪಿಸಿಕೊಂಡಿದ್ದ.
ಇಂದು ಮಂಗಳೂರಿನ ಜಪ್ಪು ಕುಡ್ಪಾಡಿಯಲ್ಲಿ ಪೊಲೀಸರು ಬಂಧಿಸಲು ಆಗಮಿಸಿದ್ದ ವೇಳೆ ತಪ್ಪಿಸಿಕೊಳ್ಳಲು ಯತ್ನಿಸಿದ ರೌಡಿ ಕಾಲಿಗೆ ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದಾರೆ. ಗುಂಡೇಟಿನಿಂದ ರೌಡಿ ಗಾಯಗೊಂಡಿದ್ದು, ಮಂಗಳೂರಿನ ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಜ.5ರಂದು ರಾತ್ರಿ ಸಿಸಿಬಿ ಪೊಲೀಸರ ಮೇಲೆ ಕಾರು ಹಾಯಿಸಿದ್ದ ರೌಡಿ ಶರಣ್ ಮೇಲೆ 20ಕ್ಕೂ ಹೆಚ್ಚು ಪ್ರಕರಣಗಳಿವೆ.
ಇದನ್ನೂ ಓದಿ: ಮಗನ ಶವ ಸಾಗಾಟದ ವೇಳೆ ಸಿಕ್ಕಿಬಿದ್ದ ಉದ್ಯಮಿ: ವಿಚ್ಛೇದನಕ್ಕಾಗಿ ಕಾಯುತ್ತಿದ್ದ ಮಹಿಳೆ - ಪೊಲೀಸರಿಂದ ಮಾಹಿತಿ
ಘಟನೆಯ ಹಿನ್ನೆಲೆ: ಸುಳ್ಯ ಕೆ.ವಿ.ಜಿ ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ ರಾಮಕೃಷ್ಣ ಎಂಬುವರ ಕೊಲೆ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿ ತಲೆಮರೆಸಿಕೊಂಡಿದ್ದು ಮತ್ತು ಮಂಗಳೂರು ನಗರದಲ್ಲಿ ಕೊಲೆ, ಕೊಲೆಯತ್ನ, ದರೋಡೆ, ಅತ್ಯಾಚಾರ, ಹಫ್ತಾ ವಸೂಲಿ ಹಾಗೂ ಫೋಕ್ಸೋ ಸೇರಿದಂತೆ ಸುಮಾರು 25 ಕ್ಕೂ ಹೆಚ್ಚು ಪ್ರಕರಣಗಳಲ್ಲಿ ರೋಹಿದಾಸ್ ಕೆ @ಶರಣ್ @ ಶರಣ್ ಪೂಜಾರಿ @ ಶರಣ್ ಆಕಾಶಭವನ ಭಾಗಿಯಾಗಿದ್ದನು. ಈತನನ್ನು ಬಂಧಿಸಲು ಸಿಸಿಬಿ ಘಟಕದ ಪೊಲೀಸ್ ನಿರೀಕ್ಷಕರಾದ ಶ್ಯಾಮ್ ಸುಂದರ್ ನೇತೃತ್ವದಲ್ಲಿ ಸಿಸಿಬಿ ತಂಡ ರಚಿಸಲಾಗಿತ್ತು. ಅದರಂತೆ ಆರೋಪಿ ಪತ್ತೆಗಾಗಿ ಸಿಸಿಬಿ ಘಟಕದ ಪಿಎಸ್ಐ ಸುದೀಪ್, ಪಿಎಸ್ಐ ಶರಣಪ್ಪ ಹಾಗೂ ಸಿಬ್ಬಂದಿಗಳ ತಂಡ ಸುಮಾರು 20 ದಿನಗಳಿಂದ ಕಾರ್ಯಾಚರಣೆ ನಡೆಸುತ್ತಿತ್ತು. ಆರೋಪಿಗೆ ಆಶ್ರಯ ನೀಡಿದ ಬಗ್ಗೆ ಮಂಗಳೂರಿನ ಬೇರೆ ಬೇರೆ ಠಾಣೆಗಳಲ್ಲಿ 7 ಜನರ ಮೇಲೆ ಒಟ್ಟು 5 ಪ್ರಕರಣಗಳು ದಾಖಲಾಗಿದ್ದು, ತನಿಖೆಯಲ್ಲಿದೆ.
ಜನವರಿ 2 ರಂದು ಆರೋಪಿಯು ಮಂಗಳೂರಿನಲ್ಲಿ ಬಿಳಿ ಬಣ್ಣದ ಸ್ವಿಪ್ಟ್ ಕಾರಿನಲ್ಲಿ ತಿರುಗಾಡುತ್ತಿದ್ದಾನೆ ಎಂಬ ಮಾಹಿತಿ ಮೇರೆಗೆ ಆರೋಪಿಯ ಪತ್ತೆಯ ಬಗ್ಗೆ ತೆರಳಿದ್ದ ಪಿಎಸ್ಐ ಸುದೀಪ್ ಹಾಗೂ ತಂಡದವರ ಮೇಲೆ ಮೇರಿಹಿಲ್ ಬಳಿ ಕಾರನ್ನು ಹಾಯಿಸಿ ಕೊಲೆ ಮಾಡಲು ಯತ್ನಿಸಿದ್ದನು. ಈ ಬಗ್ಗೆ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆಯಲ್ಲಿದೆ.
ಇಂದು ಆರೋಪಿ ರೋಹಿದಾಸ್ ಉಡುಪಿಯಲ್ಲಿದ್ದಾನೆಂದು ದೊರೆತ ಖಚಿತ ಮಾಹಿತಿ ಮೇರೆಗೆ ಸಿಸಿಬಿ ಘಟಕದ ತಂಡ ಉಡುಪಿಯಲ್ಲಿ ಬೀಡು ಬಿಟ್ಟಿತ್ತು. ಬಳಿಕ ಆರೋಪಿ ಅಲ್ಲಿಂದ ಮಂಗಳೂರು ಕಡೆಗೆ ಬಂದು ಜಪ್ಪಿನಮೊಗರು ಕುಡುಪ್ಪಾಡಿ ಎಂಬಲ್ಲಿದ್ದ. ಈ ಮಾಹಿತಿ ಮೇರೆಗೆ ಸಿಸಿಬಿ ತಂಡ ಸ್ಥಳಕ್ಕೆ ಬಂದಾಗ ಆರೋಪಿ ಕಾರಿನಲ್ಲಿ ಪರಾರಿಯಾಗಲು ಯತ್ನಿಸಿದ್ದ. ಈ ವೇಳೆ ಕಾರು ಅಡ್ಡಹಾಕಿ ಸುತ್ತುವರೆದಾಗ ತನ್ನಲ್ಲಿದ್ದ ಚೂರಿಯಿಂದ ಹಿಡಿಯಲು ಹೋದ ಸಿಬ್ಬಂದಿ ಪ್ರಕಾಶ್ ಮೇಲೆ ಹಲ್ಲೆ ನಡೆಸಿದ್ದಾನೆ. ಆಗ ಪಿಎಸ್ಐ ಸುದೀಪ್ ಅವರು ಆರೋಪಿಗೆ ಶರಣಾಗುವಂತೆ ಸೂಚಿಸಿದ್ದರೂ ಹಲ್ಲೆಗೆ ಮುಂದಾದಾಗ ಆತ್ಮ ರಕ್ಷಣೆಗಾಗಿ ಆತನ ಕಾಲಿಗೆ ಫೈರಿಂಗ್ ಮಾಡಿದ್ದಾರೆ. ನಂತರ ಆತನನ್ನು ಚಿಕಿತ್ಸೆಗಾಗಿ ಸ್ಥಳೀಯ ಕಂಕನಾಡಿ ಫಾದರ್ ಮುಲ್ಲರ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.