ಮಂಗಳೂರು: ಕರಾವಳಿಯಲ್ಲಿ ಆಟಿ ( ಆಷಾಡ) ತಿಂಗಳೆಂದರೆ ವಿಶೇಷ ಮಹತ್ವ. ಅದರಲ್ಲೂ ಆಟಿ ಅಮಾವಾಸ್ಯೆ ದಿನ ವೆಂದರೆ ಕರಾವಳಿ ಜನರು ಸಂಭ್ರಮದಿಂದ ಆಚರಿಸುತ್ತಾರೆ. ಈ ದಿನ ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಹಾಳೆ ಮರದ ಕಷಾಯ ಸೇವನೆ ಮಾಡುವುದು ಕೂಡ ವಿಶೇಷ. ಇಂದು ಆಟಿ ಅಮಾವಾಸ್ಯೆ ಆದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾಮೂಹಿಕ ಕಷಾಯ ಸೇವನೆ ನಡೆಯಿತು.
ಕರಾವಳಿ ಜಿಲ್ಲೆಯಾದ ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಈ ಆಚರಣೆ ಬಹಳ ಹಿಂದಿನಿಂದಲೂ ಇದೆ. ಆಟಿ ಅಮಾವಾಸ್ಯೆ ದಿನ ಹಾಳೆ ಮರದಲ್ಲಿ ವಿಶೇಷ ಔಷಧೀಯ ಗುಣ ಇರುತ್ತೆ ಎಂಬ ನಂಬಿಕೆಯಿದ್ದು ಅದಕ್ಕಾಗಿ ಸೂರ್ಯೋದಯಕ್ಕೂ ಮುಂಚೆ ಹಾಳೆ ಮರದ ತೊಗಟೆಯನ್ನು ತಂದು ಅದರಿಂದ ಕಷಾಯ ಮಾಡಲಾಗುತ್ತದೆ.ಹಾಳೆ ಮರದ ತೊಗಟೆಯನ್ನು ಕಲ್ಲಿನಿಂದ ಜಜ್ಜಿ ತೆಗೆದು ಅದನ್ನು ಮನೆಗೆ ಕೊಂಡೋಗಿ ಕರಿ ಮೆಣಸು, ಬೆಳ್ಳುಳ್ಳಿ, ಓಮ ಸೇರಿಸಿ ಕಷಾಯ ಮಾಡಲಾಗುತ್ತದೆ. ಅದನ್ನು ನಸುಕಿನಲ್ಲಿ ಖಾಲಿ ಹೊಟ್ಟೆಗೆ ಸೇವಿಸಲಾಗುತ್ತದೆ.
ಇತ್ತೀಚಿನ ದಿನಗಳಲ್ಲಿ ಹಾಳೆ ಮರ ಕಡಿಮೆಯಾಗಿರುವುದರಿಂದ ಮತ್ತು ನಗರ ಪ್ರದೇಶದ ಜನತೆಗೆ ಈ ಮರದ ಬಗ್ಗೆ ಅರಿವು ಇಲ್ಲದಿರುವುದರಿಂದ ಮಂಗಳೂರಿನ ಕೆಲವೊಂದು ಹೋಟೆಲ್ ಗಳಲ್ಲಿ ಮತ್ತು ಸಂಘ ಸಂಸ್ಥೆಗಳು ಕಷಾಯ ತಯಾರಿಸಿ ಉಚಿತ ಸೇವೆಯನ್ನು ನೀಡುತ್ತವೆ. ಕಹಿಯಾದರೂ ಈ ಕಷಾಯ ಕುಡಿಯುವುದಕ್ಕೆ ಜನರು ಹುಡುಕಿಕೊಂಡು ಬರುತ್ತಾರೆ. ಹೆಚ್ಚಿನವರು ತಮ್ಮ ಮನೆಯಲ್ಲಿ ಈ ಕಷಾಯ ತಯಾರಿಸುತ್ತಾರೆ.
ಕಷಾಯ ಸೇವನೆ ಬಳಿಕ ತೆಂಗಿನ ಹುರಿಯಿಂದ ಮಾಡಿದ ಗಂಜಿ ಸೇವಿಸಲಾಗುತ್ತದೆ. ಈ ಮೂಲಕ ಕರಾವಳಿಯಲ್ಲಿ ಕಷಾಯ ಸೇವನೆ ನಡೆಯುತ್ತದೆ.ಈ ಕಷಾಯ ಸೇವನೆ ಮಾಡುವುದರಿಂದ ದೇಹವು ಶೀತದ ವಾತಾವರಣವನ್ನು ತಡೆದುಕೊಳ್ಳುತ್ತದೆ ಹಾಗೂ ಹುಳಭಾಧೆಯಂತಹ ಸಮಸ್ಯೆ ಪರಿಹಾರವಾಗುತ್ತದೆ ಎಂಬ ನಂಬಿಕೆಯಿಂದ ಕರಾವಳಿಯ ಜನರು ಈ ಕಷಾಯ ವನ್ನು ಸೇವನೆ ಮಾಡಿದರು.