ಮಂಗಳೂರು: ಚಿನ್ನಾಭರಣದ ಅಂಗಡಿಯೊಂದರ ಸಿಬ್ಬಂದಿಯನ್ನು ಹತ್ಯೆೆಗೈದು ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಮಂಗಳೂರು ಜ್ಯುವೆಲ್ಲರ್ಸ್ನಲ್ಲಿ ಕೆಲಸ ಮಾಡುತ್ತಿದ್ದ ರಾಘವೇಂದ್ರ ಆಚಾರ್ಯ ಎಂಬುವರನ್ನು ಹತ್ಯೆಗೈದ ಪ್ರಕರಣದಲ್ಲಿ ಆರೋಪಿಯನ್ನು ಒಂದು ತಿಂಗಳ ಬಳಿಕ ಕೇರಳದಲ್ಲಿ ಪತ್ತೆ ಹಚ್ಚಲಾಗಿದೆ. ಕೋಝಿಕ್ಕೋಡ್ನ ಚೇಮಂಚೇರಿಯ ತುವಕೋಡ್ ನಿವಾಸಿ ಶಿಫಾಸ್ (30) ಬಂಧಿತ ಆರೋಪಿ.
ಪ್ರಕರಣದ ವಿವರ: ಫೆ.3 ರಂದು ಅಪರಿಚಿತ ವ್ಯಕ್ತಿಯೊಬ್ಬ ಮಂಗಳೂರು ಜ್ಯುವೆಲ್ಲರ್ಸ್ ಹೆಸರಿನ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ರಾಘವೇಂದ್ರ ಆಚಾರ್ಯ ಎಂಬುವರನ್ನು ಹತ್ಯೆ ಮಾಡಿದ್ದ. ಕೊಲೆ ಕೃತ್ಯ ಸಿಸಿ ಕ್ಯಾಮರಾದಲ್ಲಿ ದಾಖಲಾಗಿತ್ತು. ಕೇಶವ ಆಚಾರ್ಯ ಎಂಬವವರಿಗೆ ಸೇರಿದ ಜ್ಯುವೆಲ್ಲರ್ಸ್ನಲ್ಲಿ ಘಟನೆ ನಡೆದಿತ್ತು. ಕೇಶವ ಆಚಾರ್ಯ ಮಧ್ಯಾಹ್ನ ಊಟಕ್ಕೆ ಹೋಗಿದ್ದು, ಈ ಸಂದರ್ಭದಲ್ಲಿ ರಾಘವೇಂದ್ರ ಮಳಿಗೆಯಲ್ಲಿ ಒಬ್ಬರೇ ಇದ್ದರು. ಊಟ ಮುಗಿಸಿ ಆಚಾರ್ಯ ಜ್ಯುವೆಲ್ಲರ್ಸ್ಗೆ ಬಂದಾಗ ಅವರ ಕಾರು ಪಾರ್ಕಿಂಗ್ ಮಾಡುವ ಸ್ಥಳದಲ್ಲಿ ಅಡ್ಡವಾಗಿ ಬೈಕ್ ನಿಲ್ಲಿಸಲಾಗಿತ್ತು. ಅದನ್ನು ಸರಿಪಡಿಸುವಂತೆ ಕೇಶವ್ ಆಚಾರ್ಯ ಸಿಬ್ಬಂದಿ ರಾಘವ ಆಚಾರ್ಯಗೆ ಕರೆ ಮಾಡಿದ್ದರು.
ಆಗ ರಾಘವ ಆಚಾರ್ಯ ತನ್ನ ಮೇಲೆ ಹಲ್ಲೆಯಾಗುತ್ತಿದೆ ಎಂದು ಕಿರುಚಾಡಿದ್ದರು. ಈ ಸಂದರ್ಭ ಕೇಶವ ಆಚಾರಿ ಒಳಗೆ ಹೋದಾಗ ಅಲ್ಲಿಂದ ಆರೋಪಿ ಹೊರ ಓಡಿ ಬಂದಿದ್ದ. ಅಲ್ಲದೇ ಘಟನೆ ಬಳಿಕ ಅಂಗಡಿಯಲ್ಲಿ ಪ್ರದರ್ಶಿಸಲಾಗಿದ್ದ ಕೆಲವೊಂದು ಚಿನ್ನದ ವಸ್ತಗಳು ಕಾಣೆಯಾಗಿರುವ ಬಗ್ಗೆ ಕೇಶವ ಆಚಾರ್ಯ ಪೊಲೀಸರಿಗೆ ತಿಳಿಸಿದ್ದರು. ಘಟನಾ ಸ್ಥಳಕ್ಕೆ ಪೊಲೀಸ್ ಕಮಿಷನರ್ ಬಂದು ವಿಚಾರಣೆ ನಡೆಸಿದ್ದರು. ಸಮೀಪದ ಅಂಗಡಿಯ ಸಿಸಿಟಿವಿ ಕ್ಯಾಮರಾದಲ್ಲಿ ಶಂಕಿತ ವ್ಯಕ್ತಿ ಕಾಣಿಸಿಕೊಂಡಿದ್ದ. ಇದನ್ನು ಆಧಾರವಾಗಿರಿಸಿ ಪೊಲೀಸರು ಶೋಧ ಕಾರ್ಯ ನಡೆಸಿದ್ದರು. ಘಟನೆ ನಡೆದು ಒಂದು ತಿಂಗಳಾದರೂ ಆರೋಪಿ ಪತ್ತೆಯಾಗಿರಲಿಲ್ಲ.
ಇದನ್ನೂ ಓದಿ: ಮಂಗಳೂರು: ಚಿನ್ನಾಭರಣ ಅಂಗಡಿಗೆ ನುಗ್ಗಿ ಚಾಕುವಿನಿಂದ ಇರಿದು ಸಿಬ್ಬಂದಿ ಹತ್ಯೆ
ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಲು ಮತ್ತು ವಿವಿಧ ಲಾಡ್ಜ್‌ಗಳು ಮತ್ತು ಹೋಟೆಲ್‌ಗಳನ್ನು ಪರಿಶೀಲಿಸಲು ಪೊಲೀಸರು ಹಲವಾರು ತಂಡಗಳನ್ನು ರಚಿಸಿದ್ದರು. ಶಂಕಿತನ ಸಿಸಿಟಿವಿ ಕ್ಯಾಮರಾ ದೃಶ್ಯಗಳನ್ನು ಕರ್ನಾಟಕ ಮತ್ತು ಕೇರಳದಾದ್ಯಂತ ವ್ಯಾಪಕವಾಗಿ ಪ್ರಕಟಿಸಲಾಗಿತ್ತು. ಸಿಸಿಟಿವಿ ದೃಶ್ಯಾವಳಿ ಸಹಾಯದಿಂದ ಶಂಕಿತನ ಚಲನವಲನವನ್ನು ಕಾಸರಗೋಡಿನಲ್ಲಿ ಪತ್ತೆ ಹಚ್ಚಲಾಗಿದೆ. ಮಾ. 2 ರಂದು ಶಂಕಿತನ ಬಗ್ಗೆ ಸುಳಿವು ಸಿಕ್ಕಿದ್ದು, ಕಾಸರಗೋಡು ಜಿಲ್ಲಾ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಆರೋಪಿಯನ್ನು ಕಾಸರಗೋಡಿನಲ್ಲಿ ಬಂಧಿಸಲಾಗಿದೆ. ತಡರಾತ್ರಿಯವರೆಗೂ ನಡೆದ ವಿಚಾರಣೆಯ ನಂತರ ಆರೋಪಿ ಅಪರಾಧವನ್ನು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಆರೋಪಿ ದರೋಡೆ ಉದ್ದೇಶದಿಂದ ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಕೊಲೆ ಮಾಡಿದ ಬಳಿಕ ಆತ ತನ್ನ ಸ್ವಗ್ರಾಮ ಕೋಝಿಕ್ಕೋಡ್‌ಗೆ ತೆರಳಿದ್ದ. ಅಂದಿನಿಂದ ತಲೆಮರೆಸಿಕೊಂಡಿದ್ದ. ಶಿಫಾಸ್ 2014 ರಿಂದ 2019 ರವರೆಗೆ ದುಬೈನಲ್ಲಿ ಕೆಲಸ ಮಾಡುತ್ತಿದ್ದ. ಈತ ಮಂಗಳೂರಿನ ಕರಾವಳಿ ಕಾಲೇಜಿನಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್‌ನಲ್ಲಿ ಬಿಇ ಡಿಪ್ಲೊಮಾ 2 ವರ್ಷ ಪಡೆದು ಮಧ್ಯೆ ವಿದ್ಯಾಭ್ಯಾಸ ಮೊಟಕುಗೊಳಿಸಿದ್ದ. ಇಂದು ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಮಂಗಳೂರು ಜ್ಯುವೆಲ್ಲರಿ ಸಿಬ್ಬಂದಿ ಕೊಲೆ ಹಂತಕನ ಫೋಟೋ ರಿಲೀಸ್: ಪತ್ತೆಗೆ ಸಹಕಾರ ಕೋರಿದ ಪೊಲೀಸರು