ಪುತ್ತೂರು: ಕಳೆದ ಹಲವಾರು ವರ್ಷಗಳಿಂದ ರಸ್ತೆ ಬದಿಯಲ್ಲಿ ಸಣ್ಣ ಪುಟ್ಟ ಅಂಗಡಿಗಳನ್ನು ನಿರ್ಮಿಸಿ ಬದುಕು ಕಟ್ಟಿಕೊಂಡಿರುವ ಬೀದಿ ಬದಿ ವ್ಯಾಪಾರಸ್ಥರ ಅಂಗಡಿಗಳ ತೆರವು ಕಾರ್ಯಾಚರಣೆ ನಡೆಸಲಾಗುತ್ತಿದೆ. ಇದನ್ನು ನಿಲ್ಲಿಸದಿದ್ದಲ್ಲಿ ಎಲ್ಲಾ ಸಂತ್ರಸ್ತರನ್ನು ಸೇರಿಸಿಕೊಂಡು ಶಾಸಕರ ಕಚೇರಿ ಮುಂಭಾಗದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಪುತ್ತೂರು ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಎಚ್ಚರಿಸಿದ್ದಾರೆ.
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಈಗಾಗಲೇ ಉಪ್ಪಿನಂಗಡಿಯಲ್ಲಿ ತೆರವು ಕಾರ್ಯಾಚರಣೆ ನಡೆಸಲಾಗಿದೆ. ಇದೀಗ ಕೆದಂಬಾಡಿ ಮತ್ತು ನರಿಮೊಗರು ಗ್ರಾಪಂ ವ್ಯಾಪ್ತಿಯಲ್ಲಿ ರಸ್ತೆ ಬದಿಯಲ್ಲಿನ ಅಂಗಡಿಗಳನ್ನು ತೆರವು ಮಾಡುವ ಬಗ್ಗೆ ನೋಟಿಸ್ ನೀಡಲಾಗಿದೆ. ಇಲ್ಲಿನ ಅಂಗಡಿಗಳಿಗೆ ಪಂಚಾಯಿತಿ ಪರವಾನಿಗೆ ನೀಡಿತ್ತು. ಕೆಲವು ಅಂಗಡಿಗಳಿಗೆ ವಿದ್ಯುತ್ ಸಂಪರ್ಕವೂ ಇದೆ. ಅಲ್ಲದೆ ಯಾವುದೇ ರಸ್ತೆ ಅಗಲೀಕರಣ, ಸಾರ್ವಜನಿಕ ಅಭಿವೃದ್ಧಿ ಕೆಲಸಗಳನ್ನು ಈ ಭಾಗದಲ್ಲಿ ನಡೆಸಲಾಗುತ್ತಿಲ್ಲ. ಯಾರದೇ ವಿರೋಧವಿಲ್ಲದಿದ್ದರೂ ವಿನಾಕಾರಣ ಈ ಕಾರ್ಯಾಚರಣೆ ನಡೆಸಲಾಗುತ್ತಿದೆ. ಈ ಮೂಲಕ ಬಡವರ ಮೇಲೆ ಸರ್ವಾಧಿಕಾರಿ ಧೋರಣೆ ಮೆರೆಯಲಾಗುತ್ತಿದೆ ಎಂದು ಅವರು ಆರೋಪಿಸಿದರು.
ಕೊರೊನಾದಿಂದ ದೇಶವೇ ತತ್ತರಿಸುತ್ತಿರುವ ಸಂದರ್ಭದಲ್ಲಿ ವ್ಯಾಪಾರ, ಉದ್ದಿಮೆಗಳು ಕಂಗೆಟ್ಟಿವೆ. ಅಲ್ಲದೆ ಮಳೆಗಾಲದ ಸಂದರ್ಭದಲ್ಲಿ ತೆರವು ಕಾರ್ಯದ ಪ್ರಹಾರ ನಡೆಸುವುದು ಸರಿಯಲ್ಲ. ಈ ಬಗ್ಗೆ ಶಾಸಕರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರಿಗೂ ಮನವಿ ಮಾಡಿದ್ದೇನೆ. ಸಚಿವರು ಪೂರಕ ಸ್ಪಂದನೆ ನೀಡಿದ್ದಾರೆ. ಬಡವರ ಕಷ್ಟಗಳನ್ನು ಅರಿತಿರುವ ಶಾಸಕರು ಈ ಬಗ್ಗೆ ಕ್ರಮ ಕೈಗೊಳ್ಳಬೇಕು. ಶಾಸಕರು ಕ್ರಮ ಕೈಗೊಳ್ಳದಿದ್ದಲ್ಲಿ ಎಲ್ಲಾ ಸಂತ್ರಸ್ತರನ್ನು ಸೇರಿಸಿಕೊಂಡು ಅವರ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.
ಜಿಲ್ಲಾ ಕಾರ್ಮಿಕ ಮುಖಂಡ ಯು. ಲೋಕೇಶ್ ಹೆಗ್ಡೆ, ಲ್ಯಾನ್ಸಿ ಮಸ್ಕರೇನಸ್ ಉಪಸ್ಥಿತರಿದ್ದರು.