ಪುತ್ತೂರು: ಪುತ್ತೂರಿನಲ್ಲಿ ಕಳೆದ 4 ವರ್ಷಗಳಿಂದ ಬಡವರಿಗೆ ಪ್ರಯೋಜನಕಾರಿಯಾಗಿದ್ದ 'ಇಂದಿರಾ ಕ್ಯಾಂಟೀನ್' ಬುಧವಾರ ಬಂದ್ ಆಗಿದೆ. ಇಂದಿರಾ ಕ್ಯಾಂಟೀನ್ ಸಿಬ್ಬಂದಿಗೆ ಕಳೆದ 6 ತಿಂಗಳಿನಿಂದ ವೇತನ ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ ಸಿಬ್ಬಂದಿಯೇ ಬಂದ್ ನಿರ್ಧಾರ ಕೈಗೊಂಡಿದ್ದಾರೆ.
ಕಳೆದ 2019ನೇ ಮಾರ್ಚ್ 1ರಂದು ಪುತ್ತೂರಿನಲ್ಲಿ ಇಂದಿರಾ ಕ್ಯಾಂಟೀನ್ ಉದ್ಘಾಟನೆಗೊಂಡು ಕಾರ್ಯಾರಂಭಿಸುತ್ತಿತ್ತು. ಇಲ್ಲಿ ಅಡುಗೆಯವರು, ಕ್ಲೀನರ್ ಮತ್ತು ಸಫ್ಲಾಯರ್ ಸೇರಿ ಒಟ್ಟು 4 ಮಂದಿ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದರು. ಕಳೆದ 6 ತಿಂಗಳಿನಿಂದ ನಮಗೆ ವೇತನ ಪಾವತಿಯಾಗಿಲ್ಲ. ಹಾಗಾಗಿ ನಾವು ಬುಧವಾರದಿಂದ ಇಂದಿರಾ ಕ್ಯಾಂಟೀನ್ ಬಂದ್ ಮಾಡುತ್ತೇವೆ ಎಂಬ ಮಾಹಿತಿಯನ್ನು ಅಲ್ಲಿನ ಸಿಬ್ಬಂದಿ ಪುತ್ತೂರಿನ ಇಂದಿರಾ ಕ್ಯಾಂಟೀನ್ ಮೇಲುಸ್ತುವಾರಿ ಜವಾಬ್ದಾರಿ ಹೊಂದಿರುವ ಪುತ್ತೂರು ನಗರಸಭೆಯ ಅಧಿಕಾರಿಗಳಿಗೆ ತಿಳಿಸಿ, ಬುಧವಾರ ಇಂದಿರಾ ಕ್ಯಾಂಟೀನ್ ಬಂದ್ ಮಾಡಿ ತೆರಳಿದ್ದಾರೆ.
ಇಂದಿರಾ ಕ್ಯಾಂಟೀನ್ ಸಿಬ್ಬಂದಿ ಅಳಲು: ಇದರಿಂದಾಗಿ ಇಂದಿರಾ ಕ್ಯಾಂಟೀನ್ ಆಶ್ರಯಿಸಿಕೊಂಡಿದ್ದ ಬಡಮಂದಿ ಸಂಕಷ್ಟಕ್ಕೊಳಗಾಗಿದ್ದಾರೆ. ಕಳೆದ ಆರು ತಿಂಗಳಿನಿಂದ ನಮಗೆ ವೇತನವೇ ಬಂದಿಲ್ಲ. ಇಷ್ಟರತನಕ ಹೇಗಾದರೂ ಮುಂದುವರಿಸಿಕೊಂಡು ಬಂದಿದ್ದೇವೆ. ಆದರೆ, ನಮ್ಮ ಸಮಸ್ಯೆಗೆ ಸ್ಪಂದನೆ ಸಿಕ್ಕಿಲ್ಲ. ಹಾಗಾಗಿ ಇನ್ನು ಮುಂದೆ ಮುಂದುವರಿಸಿಕೊಂಡು ಹೋಗಲು ಸಾಧ್ಯವಿಲ್ಲ ಎಂದು ಇಂದಿರಾ ಕ್ಯಾಂಟೀನ್ ಸಿಬ್ಬಂದಿ ಅಳಲು ವ್ಯಕ್ತಪಡಿಸಿದ್ದಾರೆ.
ಪುತ್ತೂರಿನ ಇಂದಿರಾ ಕ್ಯಾಂಟೀನ್ನಲ್ಲಿ ಬೆಳಗ್ಗೆ 500 ಮಂದಿಗೆ ಉಪಹಾರ, ಮಧ್ಯಾಹ್ನ 500 ಮಂದಿಗೆ ಊಟ ಹಾಗೂ ರಾತ್ರಿ 150ರಷ್ಟು ಮಂದಿಗೆ ಊಟದ ವ್ಯವಸ್ಥೆ ಇತ್ತು. ಸಾರ್ವಜನಿಕರು ಮಾತ್ರವಲ್ಲದೇ ಹೆಚ್ಚಾಗಿ ಇಂದಿರಾ ಕ್ಯಾಂಟೀನ್ ಬಳಿಯೇ ಇರುವ ಸರ್ಕಾರಿ ಆಸ್ಪತ್ರೆಗೆ ಬರುವವರು ಉಪಹಾರ ಮತ್ತು ಊಟದ ಪ್ರಯೋಜನ ಪಡೆಯುತ್ತಿದ್ದರು.
ಸಮೀಪದಲ್ಲೇ ಇರುವ ಪುತ್ತೂರಿನ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ವಿದ್ಯಾರ್ಥಿನಿಯರು ಹೆಚ್ಚಾಗಿ ಮಧ್ಯಾಹ್ನದ ಊಟದ ಪ್ರಯೋಜನ ಪಡೆಯುತ್ತಿದ್ದರು. ರಾತ್ರಿ ವೇಳೆ 500 ಮಂದಿಗೆ ಊಟ ನೀಡುವ ಅವಕಾಶವಿದ್ದರೂ ಜನರಿಲ್ಲದ ಕಾರಣ 100 ರಿಂದ 150ರಷ್ಟು ಮಂದಿಗೆ ಬೇಕಾಗುವ ಊಟದ ವ್ಯವಸ್ಥೆಯನ್ನು ಮಾತ್ರ ಮಾಡಲಾಗುತ್ತಿತ್ತು.
ಆಸ್ಪತ್ರೆಗೆ ಬರುವ ಮಂದಿಗೆ ತೊಂದರೆ: 5 ರೂಪಾಯಿಗೆ ಉಪಹಾರ, 10 ರುಪಾಯಿಗೆ ಊಟ ನೀಡಲಾಗುತ್ತಿತ್ತು. ಅತೀ ಕಡಿಮೆ ವೆಚ್ಚದಲ್ಲಿ ಉಪಹಾರ ಮತ್ತು ಊಟ ಸಿಗುತ್ತಿದ್ದ ಕಾರಣ ಹೆಚ್ಚಾಗಿ ಬಡಜನತೆ ಇದರ ಪ್ರಯೋಜನ ಪಡೆಯುತ್ತಿದ್ದರು. ಆದರೆ, ಏಕಾಏಕಿಯಾಗಿ ಇಂದಿರಾ ಕ್ಯಾಂಟೀನ್ ಬಂದ್ ಆಗಿರುವುದರಿಂದ ನಿತ್ಯ ಅವಲಂಬಿಸಿಕೊಳ್ಳುತ್ತಿದ್ದ ವಿದ್ಯಾರ್ಥಿಗಳು, ಆಸ್ಪತ್ರೆಗೆ ಬರುವ ಮಂದಿ ತೀರಾ ತೊಂದರೆಗೊಳಗಾಗಿದ್ದಾರೆ.
ಭಾರತೀಯ ಮಾನವ ಕಲ್ಯಾಣ ಪರಿಷತ್ ಇಂದಿರಾ ಕ್ಯಾಂಟೀನ್ ಗುತ್ತಿಗೆದಾರ ಸಂಸ್ಥೆಯಾಗಿದ್ದು, ಪುತ್ತೂರು ನಗರಸಭೆಯ ಉಸ್ತುವಾರಿಯಲ್ಲಿ ಪುತ್ತೂರಿನ ಇಂದಿರಾ ಕ್ಯಾಂಟೀನ್ ನಡೆಯುತ್ತಿತ್ತು. ಗುತ್ತಿಗೆದಾರ ಸಂಸ್ಥೆಯವರು ನೀಡಿದ ಬಿಲ್ಗಳನ್ನು ಸಂಗ್ರಹಿಸಿ ಜಿಲ್ಲಾಧಿಕಾರಿ ಕಚೇರಿಗೆ ಕಳುಹಿಸಿಕೊಡುವ ಕೆಲಸವನ್ನು ನಗರಸಭೆಯ ಆರೋಗ್ಯ ಇಲಾಖೆಯ ಅಧಿಕಾರಿಗಳು ಮಾಡುತ್ತಿದ್ದರು.
ಸಹಕಾರದಿಂದ ನೇರವಾಗಿ ಹಣ ಗುತ್ತಿಗೆದಾರ ಸಂಸ್ಥೆಗೆ ಸಂದಾಯವಾಗುತ್ತಿತ್ತು. ಆದರೆ, ಕ್ಯಾಂಟೀನ್ ಸಿಬ್ಬಂದಿಗೆ ಸಂಸ್ಥೆಯವರು ವೇತನ ಪಾವತಿಸದ ಕಾರಣ ಬಂದ್ ಆಗುವಂತಾಗಿದೆ.