ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಕಸದ ತೆರಿಗೆಯನ್ನು ಹೆಚ್ಚಿಸಿರುವ ಕ್ರಮಕ್ಕೆ ಪಾಲಿಕೆಯ ಕಾಂಗ್ರೆಸ್ ಕಾರ್ಪೊರೇಟರ್ ಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಮಂಗಳೂರು ಮಹಾನಗರ ಪಾಲಿಕೆಯ ಪ್ರತಿಪಕ್ಷ ನಾಯಕ ಅಬ್ದುಲ್ ರವೂಫ್ ಅವರು, ಬಿಜೆಪಿ ಆಡಳಿತವಿರುವ ಮ.ನ.ಪಾ ಏಕಾಏಕಿ ಕಸದ ತೆರಿಗೆಯನ್ನು ಹೆಚ್ಚಿಸಿದೆ. ಹಿಂದೆ 180 ಸಂಗ್ರಹಿಸುತ್ತಿದ್ದ ಹಣವನ್ನು 600 ಮಾಡಿದೆ. ಈ ರೀತಿ ಹೆಚ್ಚು ಮಾಡಿದ್ದು ಸರಿಯಲ್ಲ, ಇದರ ವಿರುದ್ಧ ಪಾಲಿಕೆಯ ಒಳಗೂ, ಹೊರಗೂ ಹೋರಾಟ ಮಾಡುತ್ತೇವೆ ಎಂದರು.
ಕಾಂಗ್ರೆಸ್ ಅಧಿಕಾರಾವಧಿಯಲ್ಲಿ 2015-16 ರಲ್ಲಿ 30 ರೂ. ಹೆಚ್ಚಳ ಮಾಡಿದಾಗ ವಿರೋಧ ವ್ಯಕ್ತವಾಗಿತ್ತು. ಬಳಿಕ ಅದನ್ನು ತಿಂಗಳಿಗೆ 15 ರೂ. ಮಾಡಲಾಗಿತ್ತು. ಆದರೆ ಈಗ ಏಕಾಏಕಿ ಹೆಚ್ಚಳ ಮಾಡಿದ್ದಾರೆ. ಲಾಕ್ ಡೌನ್ ಅವಧಿಯಲ್ಲಿ ಜನರು ಸಂಕಷ್ಟದಲ್ಲಿದ್ದಾರೆ. ಆರ್ಥಿಕ ಪರಿಸ್ಥಿತಿ ಸರಿ ಇಲ್ಲ, ಜನರಿಗೆ ಕೆಲಸ ಇಲ್ಲ. ದೈನಂದಿನ ಬದುಕಿಗೆ ಸಂಕಷ್ಟ ಪಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಕಸದ ತೆರಿಗೆ ಹೆಚ್ಚಿಸಿರುವುದು ಸರಿಯಲ್ಲ ಎಂದು ಹೇಳಿದರು.