ಮಂಗಳೂರು: ಗಣೇಶ ಚತುರ್ಥಿಗೆ ಸಾರ್ವತ್ರಿಕ ರಜೆಯನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೆಪ್ಟೆಂಬರ್ 18ರ (ಸೋಮವಾರ) ಬದಲು ಸೆಪ್ಟೆಂಬರ್ 19 (ಮಂಗಳವಾರ) ರಂದು ರಜೆ ನೀಡಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಆದೇಶ ಹೊರಡಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗಣೇಶ ಹಬ್ಬದ ಆಚರಣೆ ರಜೆಯ ಬಗ್ಗೆ ಹಲವು ದಿನಗಳಿಂದ ಗೊಂದಲ ಸೃಷ್ಟಿಯಾಗಿತ್ತು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗಳವಾರ (ಸೆ.19) ಗಣೇಶ ಚತುರ್ಥಿ ಹಬ್ಬ ಆಚರಿಸಲಾಗುತ್ತಿದೆ. ಆದರೆ ಸರ್ಕಾರ ನಿಗದಿಪಡಿಸಿದ ರಜೆ ಸೋಮವಾರ ಆಗಿದೆ. ಈ ಕಾರಣದಿಂದ ಗಣೇಶನ ಹಬ್ಬ ಆಚರಿಸಲು ಮಂಗಳವಾರ ಸರ್ಕಾರಿ ರಜೆ ನೀಡಬೇಕು ಎಂದು ಆಗ್ರಹ ಕೇಳಿಬಂದಿತ್ತು.
ಈ ಬಗ್ಗೆ ಜನಪ್ರತಿನಿಧಿಗಳು ಮಂಗಳವಾರ ರಜೆ ನೀಡಬೇಕೆಂದು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಆದ್ದರಿಂದ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಮುಖ್ಯ ಕಾರ್ಯದರ್ಶಿ ಮತ್ತು ಜಿಲ್ಲಾಧಿಕಾರಿಯವರಿಗೆ ಸೆ.19ರಂದು ರಜೆ ನೀಡಲು ಕ್ರಮ ಕೈಗೊಳ್ಳಲು ಪತ್ರ ಮುಖೇನ ತಿಳಿಸಿದ್ದರು.
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರಕಾರದ ಕಾರ್ಯದರ್ಶಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಗಣೇಶ ಚತುರ್ಥಿ ಹಬ್ಬಕ್ಕೆ ಸೆ. 19 ರಂದು ರಜೆ ನೀಡುವಂತೆ ಸೂಚನೆ ನೀಡಿದ್ದರು. ಈ ಹಿನ್ನೆಲೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗಣೇಶ ಚತುರ್ಥಿ ಪ್ರಯುಕ್ತ ಸೆ.19 ಮಂಗಳವಾರ ದಿನದಂದು ಸರ್ಕಾರಿ ರಜೆಯನ್ನು ಘೋಷಿಸಲಾಗಿದೆ.
ಜಿಲ್ಲಾಧಿಕಾರಿಗಳ ಆದೇಶ: ಸಾರ್ವತ್ರಿಕ ರಜಾ ದಿನಗಳ ಪಟ್ಟಿಯಲ್ಲಿ ಸೆ. ಸೆ.18ರಂದು ಗಣೇಶ ಚತುರ್ಥಿ (ವರಸಿದ್ದಿ ವಿನಾಯಕ ವೃತ) ಹಬ್ಬದ ಪ್ರಯುಕ್ತ ಸಾರ್ವತ್ರಿಕ ರಜೆಯನ್ನು ಘೋಷಣೆ ಮಾಡಲಾಗಿದೆ. ಆದರೆ ಸಾರ್ವಜನಿಕ ಬೇಡಿಕೆ ಹಿನ್ನೆಲೆಯಲ್ಲಿ ಉಲ್ಲೇಖಿತ ಪತ್ರ (2)ರಲ್ಲಿ ಪರಿಶೀಲಿಸಲಾಗಿ, ಗಣೇಶ ಚತುರ್ಥಿ ದಿನ ಕರಾವಳಿಯಲ್ಲಿ ವಿಶೇಷವಾಗಿ ದೇವಸ್ಥಾನ, ದೈವಸ್ಥಾನ, ತರವಾಡು ಮನೆಗಳಲ್ಲೂ ಚೌತಿ ಹಬ್ಬವಾಗಿ ಸೆ.19 ಮಂಗಳವಾರದಂದು ರಜೆ ಘೋಷಿಸಲಾಗಿದೆ.
2023ನೇ ಸಾಲಿನ ಗಣೇಶ ಚತುರ್ಥಿ ಹಬ್ಬದ ರಜೆಯನ್ನು ದಕ್ಷಿಣ ಕನ್ನಡ ಜಿಲ್ಲಾದ್ಯಂತ ಸೆ.18.09.2023ರ ಸೋಮವಾರದಂದು ರದ್ದುಗೊಳಿಸಿ ಸೆ.19 ಮಂಗಳವಾರದಂದು ಸಾರ್ವತ್ರಿಕ ರಜೆಯನ್ನು ಘೋಷಿಸಿ ಆದೇಶಿಸಲಾಗಿದೆ. ಸೆ.18 ಸೋಮವಾರದಂದು ಕರ್ತವ್ಯದ ದಿನವೆಂದು ಪರಿಗಣಿಸಲು ಸೂಚಿಸಿದ್ದು, ಜಿಲ್ಲಾಧಿಕಾರಿ ಆದೇಶ ಪ್ರತಿಯಲ್ಲಿ ಪ್ರಕಟಿಸಲಾಗಿದೆ.
ಇದನ್ನೂಓದಿ: ಮೈಸೂರು ದಸರಾ : ಚಿನ್ನದ ಅಂಬಾರಿ ಹೊರುವ ಅಭಿಮನ್ಯು ವಿಶೇಷತೆ ಏನ್ ಗೊತ್ತಾ?