ಇಸ್ರೇಲ್ ಪರ ಪೋಸ್ಟ್ ಹಾಕಿದವನ ಮೇಲೆ ಹಲ್ಲೆ: ಐವರ ಬಂಧನ - ಎಫ್ಬಿ ಪೋಸ್ಟ್
ಕೆಲ ದಿನಗಳ ಹಿಂದೆ ಇಸ್ರೇಲ್-ಗಾಜಾ ನಡುವೆ ಸಂಘರ್ಷ ನಡೆಯುತ್ತಿದ್ದ ಸಂದರ್ಭ ಇಸ್ರೇಲ್ ಪರ ಪೋಸ್ಟ್ ಹಾಕಿದ್ದಾನೆಂದು ಯುವಕನ ಮೇಲೆ ಹಲ್ಲೆ ಮಾಡಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
![ಇಸ್ರೇಲ್ ಪರ ಪೋಸ್ಟ್ ಹಾಕಿದವನ ಮೇಲೆ ಹಲ್ಲೆ: ಐವರ ಬಂಧನ Five arrested in assault case](https://etvbharatimages.akamaized.net/etvbharat/prod-images/768-512-11913311-thumbnail-3x2-hrs.jpg?imwidth=3840)
ಮಂಗಳೂರು: ಇಸ್ರೇಲ್ ಪರ ಫೇಸ್ಬುಕ್ನಲ್ಲಿ ಪೋಸ್ಟ್ ಹಾಕಿದ ಬೇಕರಿ ಮಾಲೀಕನ ಮೇಲೆ ಹಲ್ಲೆ ನಡೆಸಿದ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಕುಂದಾಪುರ ಮೂಲದ ಯುವಕನೋರ್ವ ಮುಲ್ಕಿಯ ಕಾರ್ನಾಡಿನಲ್ಲಿ ಬೇಕರಿ ನಡೆಸುತ್ತಿದ್ದು, ಈತ ಇಸ್ರೇಲ್-ಪ್ಯಾಲೆಸ್ತೀನ್ ಸಂಘರ್ಷದ ಸಮಯದಲ್ಲಿ ಇಸ್ರೇಲ್ ಪರ ಫೇಸ್ಬುಕ್ನಲ್ಲಿ ಪೋಸ್ಟ್ ಹಾಕಿದ್ದ. ಇದನ್ನು ಗಮನಿಸಿದ ಸ್ಥಳೀಯ ಕೆಲ ಯುವಕರು ಬೇಕರಿಗೆ ನುಗ್ಗಿ ದಾಂಧಲೆ ನಡೆಸಿ, ಬೇಕರಿ ಮಾಲೀಕನ ಮೇಲೆ ಹಲ್ಲೆ ನಡೆಸಿದ್ದರು. ಅಲ್ಲದೆ ಈ ರೀತಿ ಪೋಸ್ಟ್ ಹಾಕಿರುವುದು ತಪ್ಪಾಯಿತೆಂದು ಕ್ಷಮೆ ಕೇಳುವಂತೆ ಒತ್ತಾಯಿಸಿ, ಅದನ್ನು ವಿಡಿಯೋ ಮಾಡಿದ್ದರು. ಮುಂದೆ ಈ ರೀತಿ ಪೋಸ್ಟ್ ಹಾಕಿದ್ದಲ್ಲಿ ಜೀವ ತೆಗೆಯುತ್ತೇವೆ ಎಂದು ಬೆದರಿಕೆ ಹಾಕಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಈ ವಿಚಾರ ಅರಿತ ಹಿಂದೂ ಸಂಘಟನೆಗಳ ನಾಯಕರು ಬೇಕರಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದರು. ಬಳಿಕ ಮುಲ್ಕಿ ಪೊಲೀಸರಿಗೆ ದೂರು ನೀಡಿದ್ದರು. ಆರೋಪಿಗಳನ್ನು ಬಂಧಿಸಿದ ಪೊಲೀಸರು ಪಣಂಬೂರು ಡಿಸಿಪಿ ಮುಂದೆ ಹಾಜರುಪಡಿಸಿದ್ದರು. ಆರೋಪಿಗಳಿಗೆ ಷರತ್ತುಬದ್ಧ ಜಾಮೀನು ಮಂಜೂರಾಗಿದೆ.
ಹಲ್ಲೆಗೊಳಗಾದ ಯುವಕನ ಬೇಕರಿಗೆ ಶಾಸಕ ಉಮಾನಾಥ್ ಕೋಟ್ಯಾನ್ ಹಾಗೂ ಇತರ ಸ್ಥಳೀಯ ಬಿಜೆಪಿ ಮುಖಂಡರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಲ್ಲೆ ನಡೆಸಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಮುಲ್ಕಿ ಪೊಲೀಸರಿಗೆ ಮನವಿ ಮಾಡಿದ್ದಾರೆ.
ಓದಿ : ಪಾರ್ಶ್ವವಾಯು ಪೀಡಿತ ತಂದೆ ತಲೆಗೆ ಕೊಡಲಿಯಿಂದ ಹೊಡೆದ ಮಗ!