ಉಳ್ಳಾಲ: ಲಾಕ್‍ಡೌನ್ ಸಂದರ್ಭದಲ್ಲಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಉಳ್ಳಾಲ ವ್ಯಾಪ್ತಿಯ ರಿಕ್ಷಾ ಚಾಲಕರಿಗೆ ಆರ್ಥಿಕ ಸಹಾಯ ಮಾಡುವುದಾಗಿ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ಮಂಗಳೂರು ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಹನೀಫ್ ತಲಪಾಡಿ ಹೇಳಿದರು.
ಈ ಕುರಿತು ಮಾತನಾಡಿದ ಅವರು, ಉಳ್ಳಾಲ ವ್ಯಾಪ್ತಿಯ ರಿಕ್ಷಾ ಚಾಲಕರು ಅಗತ್ಯ ದಾಖಲೆಗಳನ್ನು ಪಕ್ಷದ ಕಚೇರಿಯಲ್ಲಿ ಜೂ. 18ರ ಒಳಗೆ ಸಲ್ಲಿಸುವಂತೆ ತಿಳಿಸಲಾಗಿದೆ. ಸರ್ಕಾರ ರಿಕ್ಷಾ ಚಾಲಕರಿಗೆ ಲಾಕ್‍ಡೌನ್ ಪರಿಹಾರ ಘೋಷಿಸಿದ್ದರೂ ದಾಖಲೆ ಹೆಸರಿನಲ್ಲಿ ಹಲವರು ವಂಚಿತರಾಗಿದ್ದಾರೆ. ಸರ್ಕಾರ ನೀಡುವ 5,000 ರೂ. ಪಡೆಯಲು 10,000 ರೂ. ದಾಖಲೆ ತಯಾರಿಸಲು ವ್ಯಯಿಸುವಂತಹ ಪರಿಸ್ಥಿತಿ ಎದುರಾಗಿದೆ. ಇವೆಲ್ಲವನ್ನು ಮನಗಂಡು ಪಕ್ಷ ಚಾಲಕ್ ಸಾಥ್ ಯೋಜನೆಯನ್ನು ಜಾರಿಗೆ ತಂದಿದೆ ಎಂದರು.
ಪಕ್ಷದ ಟೀಂ ವೆಲ್ಫೇರ್ ವತಿಯಿಂದ ಲಾಕ್‍ಡೌನ್ ಸಂದರ್ಭ ಸುಮಾರು 500ಕ್ಕೂ ಅಧಿಕ ಮನೆಗಳಿಗೆ ದಿನಸಿ ಕಿಟ್ ವಿತರಿಸಲಾಗಿದೆ. ಆಸ್ಪತ್ರೆಯ ರೋಗಿಗಳು ಮತ್ತು ಪರಿಚಾರಕರು ಸೇರಿದಂತೆ 250 ಮಂದಿಗೆ ಪಕ್ಷದ ವತಿಯಿಂದ ಊಟದ ವ್ಯವಸ್ಥೆ ಮಾಡಲಾಗಿತ್ತು. ಸುಮಾರು 25 ರೋಗಿಗಳಿಗೆ 4 ಲಕ್ಷ ರೂ. ಅಗತ್ಯ ನೆರವು ನೀಡಲಾಗಿದೆ ಎಂದರು.