ಬೆಳ್ತಂಗಡಿ: ಸಾವಿರ ವರುಷಗಳ ಇತಿಹಾಸ ಹೊಂದಿರುವ ನಾಳ ದುರ್ಗಾ ಪರಮೇಶ್ವರಿ ದೇವಾಲಯದಲ್ಲಿ ಕಣ್ವ ಮುನಿಗಳು ತಪಸ್ಸು ಮಾಡುವಾಗ ನೆರಳು ಕೊಟ್ಟಿದ್ದ ಒಂದು ಬೃಹದಾಕೃತಿಯ ರೆಂಜೆಯ ಮರ ಇತ್ತೀಚಿನವರೆಗೂ ದೇವಾಲಯದ ಮುಂಭಾಗದಲ್ಲಿ ಇತ್ತು. ಕ್ಷೇತ್ರದಲ್ಲಿರುವ ವಿಗ್ರಹವನ್ನು ಕಣ್ವ ಮುನಿಯೇ ಪ್ರತಿಷ್ಠಾಪಿಸಿದರೆಂಬ ಕಥೆಯಿದೆ. ಮಾರ್ಕಂಡೇಯ ಪುರಾಣ ಹೇಳುವ ಪ್ರಕಾರ ವೈಪ್ರಚಿತ್ತ ಎಂಬ ದಾನನನ್ನು ದೇವಿಯು ವಧಿಸಿದ್ದು ಇಲ್ಲಿಯೇ ಎಂಬ ಕತೆಯಿದೆ.
ಇಲ್ಲಿರುವ ವನದುರ್ಗೆ ಅಥವಾ ಮಹಿಷ ಮರ್ದಿನಿಯ ರೂಪದಲ್ಲಿರುವ ದೇವಿಯ ಮನೋಹರ ವಿಗ್ರಹವು ಒಂದು ಕೈಯಲ್ಲಿ ತ್ರಿಶೂಲ ಧಾರಿಣಿಯಾಗಿದೆ. ಶಂಖ, ಚಕ್ರ, ಅಭಯ ಮುದ್ರೆಗಳು ಮೂರು ಕೈಗಳಲ್ಲಿವೆ. ಈ ಕ್ಷೇತ್ರಕ್ಕೆ ಕುಡುಪಿನಿಂದ ಸುಬ್ರಹ್ಮಣ್ಯ ಸ್ವಾಮಿಯು ಬಂದು ಜಾಗ ಬೇಡಿದ್ದ ದೇವಿಯು ಅದಕ್ಕೆ ನಿರಾಕರಿಸಿದ್ದಳು. ಇಲ್ಲಿರುವ ಗೋಪುರದಲ್ಲಿ ಹುತ್ತವೊಂದನ್ನು ತನ್ನ ಸನ್ನಿಧಾನದ ಸಾಕ್ಷ್ಯವಾಗಿ ಉಳಿಸಿ ಸುಬ್ರಹ್ಮಣ್ಯನು ಬಳ್ಳಮಂಜಕ್ಕೆ ತೆರಳಿದ ಎನ್ನುವ ಐತಿಹ್ಯವೂ ಇದೆ.
ಓದಿ:ಕದ್ರಿಯ ಶ್ರೀಮಂಜುನಾಥ ಸ್ವಾಮಿ ಜಾತ್ರಾ ಮಹೋತ್ಸವ ಸಂಪನ್ನ
ಬಹಳ ಪುರಾತನವಾದ ಈ ದೇವಾಲಯದಲ್ಲಿ ನಾಗಾಲಯ ಇರುವುದರಿಂದ ಇಂತಹ ದೇವಾಲಯ ಬಹಳ ಅಪರೂಪ ಮಂದಾರ್ತಿ ಕ್ಷೇತ್ರ ಬಿಟ್ಟರೆ ನಾಳ ದೇವಾಲಯ ಮಾತ್ರ ಕಾಣಸಿಗುತ್ತದೆ. ದೇವಿ ಭಕ್ತರ ಇಷ್ಟಾರ್ಥವನ್ನು ಈಡೇರಿಸಿ ಅವರ ಕಷ್ಟ ನಿವಾರಣೆಯಾದ ನಂತರ ಇಲ್ಲಿ ಬಂದು ಹರಕೆ ತೀರಿಸುವವರ ಸಂಖ್ಯೆ ಹೆಚ್ಚಾಗಿದೆ. ಅದಲ್ಲದೆ ವಿಶೇಷ ದಿನಗಳಲ್ಲಿ ಅನ್ನದಾನ, ಸಾಂಸ್ಕೃತಿಕ ಕಾರ್ಯಕ್ರಮಗಳೂ ನಿರಂತರ ನಡೆಯುತ್ತಾ ಬರುತ್ತಿವೆ.
ಈ ದೇವಾಲಯಕ್ಕೆ ಬಹಳ ವರುಷಗಳಿಂದ ನಾನು ಬರುತಿದ್ದೇನೆ. ಈ ದೇವಿ ಸನ್ನಿಧಿಯಲ್ಲಿ ನಾನು ಬೇಡಿಕೊಂಡ ಎಲ್ಲಾ ಕಷ್ಟಗಳಿಗೂ ತಾಯಿ ಪರಿಹಾರ ನೀಡಿದ್ದಾಳೆ. ಧನುರ್ಮಾಸ ಸಮಯದಲ್ಲಿ ಭಕ್ತರ ಸಂಖ್ಯೆ ಅಧಿಕವಾಗಿರುತ್ತದೆ. ದೇವಿ ಸನ್ನಿದಿಯಲ್ಲಿ ಯಾವುದೇ ಸಂಕಲ್ಪ ಮಾಡಿಕೊಂಡರೂ ನಿವಾರಣೆಯಾಗುತ್ತದೆ. ಅದಕ್ಕೆ ಸಾಕ್ಷಿ ಎಂಬಂತೆ ದಿನದಿಂದ ದಿನಕ್ಕೆ ಭಕ್ತರ ಸಂಖ್ಯೆ ಹೆಚ್ಚಾಗಿ ಕಂಡು ಬರುತ್ತಿದೆ ಎನ್ನುತ್ತಾರೆ ಭಕ್ತರೊಬ್ಬರು.