ಪುತ್ತೂರು: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ, ಪುತ್ತೂರು ಬಾಲವನದ ನಿರ್ಮಾತೃ ಡಾ. ಶಿವರಾಮ ಕಾರಂತ ಅವರ ಕರ್ಮಭೂಮಿ ಬಾಲವನವನ್ನು ಜನತೆಗೆ ಪರಿಚಯಿಸುವ ಹಾಗೂ ಬಾಲವನವನ್ನು ಜನಸಂಪರ್ಕ ಕೇಂದ್ರವನ್ನಾಗಿಸುವ ನಿಟ್ಟಿನಲ್ಲಿ `ಬಾಲವನಕ್ಕೆ ಹೆಜ್ಜೆ ಇಡೋಣ' ಸಾಂಸ್ಕೃತಿಕ ಜಾಥಾ ಕಾರ್ಯಕ್ರಮ ನಡೆಯಿತು.
ಸಾಂಸ್ಕೃತಿಕ ಜಾಥಾಕ್ಕೆ ಪುತ್ತೂರು ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಬಳಿ ತಾಪಂ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್ ಚಾಲನೆ ನೀಡಿದರು. ಕಾರಂತರ ಆಶಯದಂತೆ ಬಾಲವನವನ್ನು ಮತ್ತೆ ಕಟ್ಟುವ ಕಾಯಕಕ್ಕೆ ಪೂರ್ವಭಾವಿಯಾಗಿ ಈ ಸಾಂಸ್ಕೃತಿಕ ಜಾಥಾವನ್ನು ಪುತ್ತೂರು ಉಪ ವಿಭಾಗಾಧಿಕಾರಿ ಕಚೇರಿ, ಶಿವರಾಮ ಕಾರಂತ ಬಾಲವನ ಅಭಿವೃದ್ಧಿ ಸಮಿತಿ ಮತ್ತು ಪುತ್ತೂರು ತಾಲೂಕು ಪತ್ರಕರ್ತರ ಸಂಘದ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಪುತ್ತೂರು ಕೆಎಸ್ಆರ್ಟಿಸಿ ಬಸ್ ನಿಲ್ದಾಣದಿಂದ ಪರ್ಲಡ್ಕದ ಬಾಲವನದವರೆಗೆ ನಡೆದ ಸಾಂಸ್ಕೃತಿಕ ಜಾಥಾದಲ್ಲಿ ಜಾನಪದ ಸಂಸ್ಕೃತಿ ಬಿಂಬಿಸುವ ಉತ್ತರ ಕರ್ನಾಟಕದ ನಂದಿಕೋಲು ಕುಣಿತ, ಡೊಳ್ಳು ಕುಣಿತ, ಬೊಂಬೆ ನೃತ್ಯ ಗಮನ ಸೆಳೆದವು. ಪುತ್ತೂರು ವಿವೇಕಾನಂದ, ಫಿಲೋಮಿನಾ ಹಾಗೂ ಮಹಿಳಾ ಪ್ರಥಮ ದರ್ಜೆ ಕಾಲೇಜುಗಳ ಎನ್‌ಸಿಸಿ ತಂಡಗಳು ಮತ್ತು ಎನ್‌ಎಸ್‌ಎಸ್ ತಂಡಗಳು ಪಾಲ್ಗೊಂಡಿದ್ದವು.
ಸ್ವಾಮಿ ವಿವೇಕಾನಂದ ರಾಜ್ಯ ಯುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗಿಯಾಗಲು ಬಂದ ರಾಜ್ಯದ 30 ಜಿಲ್ಲೆಗಳ ಪ್ರತಿನಿಧಿಗಳೂ ಈ ಸಾಂಸ್ಕೃತಿಕ ಜಾಥಾದಲ್ಲಿ ಭಾಗವಹಿಸಿದರು. ಪುತ್ತೂರು ಉಪ ವಿಭಾಗಾಧಿಕಾರಿ ಡಾ. ಯತೀಶ್ ಉಳ್ಳಾಲ್, ನಗರಸಭಾ ಪೌರಾಯುಕ್ತೆ ರೂಪಾ ಶೆಟ್ಟಿ, ಜಿಲ್ಲಾ ಯುವಜನ ಒಕ್ಕೂಟದ ಪೂರ್ವಾಧ್ಯಕ್ಷ ಶೈಲೇಶ್ ಅಂಬೆಕಲ್ಲು, ಕರ್ನಾಟಕ ಸಂಘದ ಅಧ್ಯಕ್ಷ ಬಿ.ಪುರಂದರ ಭಟ್, ನಗರಸಭಾ ಸದಸ್ಯೆ ವಿದ್ಯಾಗೌರಿ, ನಗರಸಭಾ ಮಾಜಿ ಸದಸ್ಯೆ ಜೋಹರಾ ನಿಸಾರ್, ಅಸಹಾಯಕರ ಸೇವಾ ಟ್ರಸ್ಟ್ ಸಂಚಾಲಕಿ ನಯನಾ ರೈ, ಸುರೇಶ್ ರೈ ಸೂಡಿಮುಳ್ಳು ಮತ್ತಿತರರು ಭಾಗವಹಿಸಿದ್ದರು.