ಕಡಬ: ಪ್ರಸ್ತುತ ಮೈಸೂರು ಲಷ್ಕರೆ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಆಗಿರುವ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ಮೂಲದ ಪೊಲೀಸ್ ಅಧಿಕಾರಿಯೊಬ್ಬರು ತಾನು ಕರ್ತವ್ಯ ನಿರ್ವಹಿಸುತ್ತಿರುವ ಮೈಸೂರಿನಲ್ಲಿ ಕೊರೊನಾ ಜಾಗೃತಿ ಹಾಡಿನ ಮೂಲಕ ಮನೆ ಮಾತಾಗಿದ್ದಾರೆ.
1997ರಲ್ಲಿ ಪೊಲೀಸ್ ಇಲಾಖೆಗೆ ನೇಮಕಗೊಂಡ ಸುರೇಶ್ ಕುಮಾರ್ ಕೋಡಿಬೈಲು ಅವರು ಮೈಸೂರು, ಚಿಕ್ಕಮಗಳೂರು, ಸೋಮವಾರಪೇಟೆ, ಗೋಣಿಕೊಪ್ಪ, ಶುಂಠಿಕೊಪ್ಪ, ಮೈಸೂರು ಲಷ್ಕರ್ ಪೋಲಿಸ್ ಠಾಣೆಯಲ್ಲಿ ಸಬ್ ಇನ್ಸ್ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸಿದವರು. 2016ರಲ್ಲಿ ಇನ್ಸ್ಪೆಕ್ಟರ್ ಆಗಿ ಸೇವಾ ಬಡ್ತಿಗೊಂಡು ಚಾಮರಾಜನಗರ, ಜಯಲಕ್ಷ್ಮಿಪುರ (ಮೈಸೂರು) ಗಳಲ್ಲಿ ಕರ್ತವ್ಯ ಮಾಡಿದ್ದು ಪ್ರಸ್ತುತ ಮೈಸೂರಿನ ಲಷ್ಕರ್ ಪೊಲೀಸ್ ಠಾಣೆಯಲ್ಲಿ ಇನ್ಸ್ ಪೆಕ್ಟರ್ ಆಗಿದ್ದಾರೆ.
ಇದೀಗ ಇವರ ಕೊರೊನಾ ಜಾಗೃತಿ ಹಾಡು ಸಾಮಾಜಿಕ ಜಾಲತಾಣಗಳಲ್ಲಿ ಸೇರಿದಂತೆ ಸಖತ್ ವೈರಲ್ ಆಗುತ್ತಿದೆ. ಇವರು ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕೋಡಿಬೈಲು ನಿವಾಸಿ. ಕಡಬದ ದುರ್ಗಾಂಬಿಕಾ ಭಜನಾ ಮಂಡಳಿಯಲ್ಲಿ ಸುರೇಶ್ ಅವರು ಭಜನಾ ಹಾಡುಗಳನ್ನು ಹಾಡುತ್ತಿದ್ದರು.
ಇನ್ನು ಇವರು ಹಾಡಿರುವ ಹಾಡಿನ ರಚನೆಯನ್ನು ಅಶ್ವಿನಿ ಮುರಳಿ ಮಾಡಿದ್ದು, ರಾಕೇಶ್ ಸುಧೀರ್ ಸಂಗೀತ ನೀಡಿದ್ದಾರೆ. ಸಂಗೀತ ಸಂಯೋಜನೆಯನ್ನು ಸ್ಟಾಂಡ್ಲಿ ಪೀಟರ್ ಮಾಡಿದ್ದು, ವಿಡಿಯೋಗ್ರಾಫಿಯನ್ನು ಪವನ್ ಪ್ರಕಾಶ್ ಮಾಡಿದ್ದಾರೆ. ಪೊಲೀಸ್ ಉನ್ನತ ಅಧಿಕಾರಿಗಳಿಂದ ಸುರೇಶ್ ಅವರ ಹಾಡು ಭೇಷ್ ಎನಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲೂ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.