ಮಂಗಳೂರು (ದ.ಕ) : ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಮನೆ ಮೇಲೆ ಸಿಬಿಐ ದಾಳಿ ನಡೆಸಿರುವುದನ್ನು ಖಂಡಿಸಿ ದ.ಕ ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯಕರ್ತರು ನಗರದ ಕಾಂಗ್ರೆಸ್ ಕಚೇರಿಯ ಮುಂಭಾಗ ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು. ಈ ಸಂದರ್ಭ ಪೊಲೀಸರು ದ.ಕ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಅವರನ್ನು ವಶಕ್ಕೆ ಪಡೆದಿದ್ದಾರೆ.
ಪ್ರತಿಭಟನಾಕಾರರು ಏಕಾಏಕಿ ರಸ್ತೆ ಮಧ್ಯೆ ಟೈರ್ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಪೊಲೀಸರು ಇದನ್ನು ತಡೆಯಲೆತ್ನಿಸಿದಾಗ ಪ್ರತಿಭಟನಾಕಾರರು ರಸ್ತೆ ಮಧ್ಯೆಯೇ ಕುಳಿತು ಘೋಷಣೆ ಕೂಗಿದರು.
ಈ ಸಂದರ್ಭ ಪೊಲೀಸರು ಪ್ರತಿಭಟನೆಯ ನೇತೃತ್ವ ವಹಿಸಿದ ಮಿಥುನ್ ರೈ ಅವರನ್ನು ವಶಕ್ಕೆ ಪಡೆದು ವಾಹನಕ್ಕೆ ಹತ್ತಿಸಿದ ಕೂಡಲೇ ಆಕ್ರೋಶಿತರಾದ ಪ್ರತಿಭಟನಾಕಾರರು ಪೊಲೀಸ್ ವಾಹನ ತಡೆಯಲೆತ್ನಿಸಿದರು. ಬಳಿಕ ಕಾಂಗ್ರೆಸ್ ಮುಖಂಡರ ಮಧ್ಯಪ್ರವೇಶದಿಂದ ಪರಿಸ್ಥಿತಿ ತಣ್ಣಗಾಯಿತು.