ಪುತ್ತೂರು: ಲಾಕ್‌ಡೌನ್ ಹಿನ್ನೆಲೆಯಲ್ಲಿ ಸಂಕಷ್ಟದಲ್ಲಿರುವ ಬಿಪಿಎಲ್, ಎಪಿಎಲ್ ಹಾಗೂ ಅಂತ್ಯೋದಯ ಪಡಿತರ ಕಾರ್ಡುದಾರರಿಗೆ ಮೇ 2ರಿಂದ ಕೇಂದ್ರ ಸರ್ಕಾರದಿಂದ ಸರಬರಾಜಾಗಿರುವ ಪಡಿತರ ವಿತರಣೆ ಆರಂಭಿಸಲಾಗುತ್ತಿದೆ.
ಈ ನಿಟ್ಟಿನಲ್ಲಿ ನ್ಯಾಯಬೆಲೆ ಅಂಗಡಿಗಳು ಸಮರ್ಪಕ ವಿತರಣೆಗೆ ಮುಂದಾಗಬೇಕು ಎಂದು ಪುತ್ತೂರು ಉಪವಿಭಾಗಾಧಿಕಾರಿ ಡಾ.ಯತೀಶ್ ಉಳ್ಳಾಲ್ ತಿಳಿಸಿದರು. ಪುತ್ತೂರು ತಹಶೀಲ್ದಾರ್ ರಮೇಶ್ ಬಾಬು ಅವರು ಮಾತನಾಡಿ, ರಾಜ್ಯ ಸರ್ಕಾರ ನೀಡಿದ ಪಡಿತರವನ್ನು ಸಮರ್ಪಕ ರೀತಿ ನ್ಯಾಯಬೆಲೆ ಅಂಗಡಿಗಳಿಂದ ವಿತರಿಸಲಾಗುವುದು. ಇದೀಗ ಕೇಂದ್ರ ಸರ್ಕಾರದ ‘ಪ್ರಧಾನಮಂತ್ರಿ ಗರೀಬ್ ಕಲ್ಯಾಣ’ಯೋಜನೆಯಡಿ ಏಪ್ರಿಲ್ ಮತ್ತು ಮೇ ತಿಂಗಳ ಪಡಿತರ ವಿತರಣೆ ಮಾಡಬೇಕು. ರಾಜ್ಯ ಸರ್ಕಾರದ ಪಡಿತರ ವಿತರಣೆಯಲ್ಲಿ ಒಟಿಪಿ, ಬಯೋಮೆಟ್ರಿಕ್ ಕಡ್ಡಾಯವಾಗಿರಲಿಲ್ಲ. ಆದರೆ, ಈ ಬಾರಿ ಒಟಿಪಿ ಅಥವಾ ಬಯೋಮೆಟ್ರಿಕ್ ಬಳಕೆ ಕಡ್ಡಾಯವಾಗಿದೆ.
ಕೋವಿಡ್-19 ನೋಡೆಲ್ ಅಧಿಕಾರಿ ರಾಜುಮೊಗವೀರ ಮಾತನಾಡಿ, ಜನತೆಗೆ ತೊಂದರೆಯಾಗದಂತೆ ವಿತರಣೆಯಾಗಬೇಕು. ಎಲ್ಲಿಯೂ ಲೋಪವಾಗದಂತೆ ಸಕಾಲಿಕ ಕ್ರಮ ಅನುಸರಿಸಬೇಕು ಎಂದರು.
ಅಕ್ಕಿ, ಗೋಧಿ ತೂಕದಲ್ಲಿ ವ್ಯತ್ಯಾಸ : ನ್ಯಾಯಬೆಲೆ ಅಂಗಡಿಗಳಿಗೆ ಸರಬರಾಜುಗೊಳ್ಳುತ್ತಿರುವ ಅಕ್ಕಿ, ಗೋಧಿಗಳಲ್ಲಿ ನಿಗದಿತ ಕೆಜಿಗಿಂತ ಕಡಿಮೆ ಇರುತ್ತದೆ. ಇದರಿಂದ ನ್ಯಾಯಬೆಲೆ ಅಂಗಡಿಗಳನ್ನು ನಡೆಸುತ್ತಿರುವ ಕೃಷಿ ಪರಿಷತ್ತಿನ ಸಹಕಾರ ಸಂಘಗಳಿಗೆ ನಷ್ಟ ಉಂಟಾಗುತ್ತಿದೆ. ಈ ಬಗ್ಗೆ ಸರಿಯಾದ ಕ್ರಮ ಕೈಗೊಳ್ಳಬೇಕು ಎಂದು ಸವಣೂರು, ಕಾಣಿಯೂರು ಮತ್ತಿತರ ಸೊಸೈಟಿ ವ್ಯವಸ್ಥಾಪಕರು ಅಧಿಕಾರಿಗಳನ್ನು ಆಗ್ರಹಿಸಿದರು.
ಪಡಿತರ ವಿತರಣೆ ವಿವರ : ಬಿಪಿಎಲ್ ಕಾರ್ಡುದಾರರಿಗೆ ಪ್ರತಿ ಸದಸ್ಯರಿಗೆ 10 ಕೆಜಿ ಅಕ್ಕಿ, ಪ್ರತಿ ಕುಟುಂಬಕ್ಕೆ4 ಕೆಜಿ ಗೋಧಿ ಮತ್ತು 1 ಕೆಜಿ ಬೇಳೆ ನೀಡಲಾಗುವುದು. ಅಂತ್ಯೋದಯ ಕಾರ್ಡುದಾರರಿಗೆ ಪ್ರತಿ ಸದಸ್ಯರಿಗೆ 10 ಕೆಜಿ ಅಕ್ಕಿ, ಪ್ರತಿ ಕಾರ್ಡಿಗೆ ಒಂದು ಕೆಜಿ ಬೇಳೆ. ಅಸ್ತಿತ್ವದಲ್ಲಿರುವ ಎಪಿಎಲ್ ಕಾರ್ಡಿನಲ್ಲಿ ಅಕ್ಕಿ ಬೇಕು ಎಂದು ಸಮ್ಮತಿ ಸೂಚಿಸದ ( ನಾಟ್ ವಿಲ್ಲಿಂಗ್ ) ಪಡಿತರದಾರರಿಗೆ ಮಾತ್ರ ಈ ಬಾರಿ ಅಕ್ಕಿಗೋಧಿ ಬೇಳೆ ನೀಡಲಾಗುವುದು.
ಏಕವ್ಯಕ್ತಿ ಪಡಿತರ ಕಾರ್ಡುದಾರರಿಗೆ 5 ಕೆಜಿ, ಹೆಚ್ಚು ಮಂದಿ ಇರುವ ಕುಟುಂಬಕ್ಕೆ 10 ಕೆಜಿ ಅಕ್ಕಿ ನೀಡಲಾಗುತ್ತದೆ. ಕೆಜಿಗೆ ₹15 ದರದಲ್ಲಿ ಎಪಿಎಲ್ ಪಡಿತರ ಕಾರ್ಡುದಾರರಿಗೆ ಪಡಿತರ ವಿತರಣೆ ಮಾಡಲಾಗುವುದು. ಆದರೆ, ಕೇಂದ್ರ ಸರ್ಕಾರ ನೀಡಿರುವ ಯೋಜನೆಯಲ್ಲಿ ಈ ಕಾರ್ಡುದಾರರಿಗೆ ಪಡಿತರ ವಿತರಣೆ ಮಾಡಲಾಗುವುದಿಲ್ಲ ಎಂದು ತಹಶೀಲ್ದಾರ್ ರಮೇಶ್ ಬಾಬು ತಿಳಿಸಿದರು.