ಮಂಗಳೂರು : ಶಾಲೆಗೆ ಹೊರಡುತ್ತಿದ್ದ ಬಾಲಕನೋರ್ವ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ನಗರದ ಸುರತ್ಕಲ್ ನಲ್ಲಿ ನಡೆದಿದೆ. ಸುರತ್ಕಲ್ ನ ಕೃಷ್ಣಾಪುರ ಏಳನೇ ಬ್ಲಾಕ್ ನಿವಾಸಿ ಮೊಹಮ್ಮದ್ ಹಸೀಮ್ (14) ಮೃತ ಬಾಲಕ. ಮೃತ ಮೊಹಮ್ಮದ್ ಹಸೀಮ್ ಎಂಟನೇ ತರಗತಿಯಲ್ಲಿ ಓದುತ್ತಿದ್ದನು. ಸೋಮವಾರ ಬೆಳಗ್ಗೆ ಎಂದಿನಂತೆ ಬಾಲಕ ಹಸೀಮ್ ಶಾಲೆಗೆ ತೆರಳಲು ಸಿದ್ಧವಾಗುತ್ತಿದ್ದನು. ಈ ವೇಳೆ ಏಕಾಏಕಿ ತಲೆ ತಿರುಗಿ ಬಿದ್ದಿದ್ದಾನೆ. ತಕ್ಷಣ ಬಾಲಕನನ್ನು ಮುಕ್ಕದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಅದಾಗಲೇ ಬಾಲಕ ಮೃತಪಟ್ಟಿರುವುದಾಗಿ ಆಸ್ಪತ್ರೆ ವೈದ್ಯರು ಘೋಷಿಸಿದ್ದಾರೆ. ಮೃತ ಹಸೀಮ್ ಅಬ್ದುಲ್ ರೆಹಮಾನ್ ದಂಪತಿಯ ಮೂವರು ಪುತ್ರರಲ್ಲಿ ಎರಡನೆಯವನು.
ಕೊಡಗಿನಲ್ಲಿ ಆರನೇ ತರಗತಿ ವಿದ್ಯಾರ್ಥಿಗೆ ಹೃದಯಾಘಾತ : ಆರನೇ ತರಗತಿ ವಿದ್ಯಾರ್ಥಿ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಕೊಡಗು ಜಿಲ್ಲೆಯಲ್ಲಿ ಮೂರು ದಿನಗಳ ಹಿಂದೆ ನಡೆದಿತ್ತು. ಕುಶಾಲನಗರ ತಾಲೂಕಿನ ಕೂಡುಮಂಗಳೂರು ಗ್ರಾಮದ ಮಂಜಾಚಾರಿ ಎಂಬವರ ಪುತ್ರ ಕೀರ್ತನ್ (12) ಮೃತಪಟ್ಟಿದ್ದ. ಮೃತ ಕೀರ್ತನ್ ಕೊಪ್ಪಭಾರತ ಮಾತಾ ಶಾಲೆಯಲ್ಲಿ ಆರನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದನು.
ಕಳೆದ ಶನಿವಾರ ತಡರಾತ್ರಿ ಮಲಗಿದ್ದ ಕೀರ್ತನ್ ಎರಡು ಬಾರಿ ಕಿರುಚಿಕೊಂಡಿದ್ದ. ಈ ವೇಳೆ ಎಚ್ಚರಗೊಂಡ ಪೋಷಕರು ತಕ್ಷಣ ಕುಶಾಲನಗರ ಆಸ್ಪತ್ರೆಗೆ ಕರೆದೊಯ್ಯುವ ವೇಳೆಗೆ ಬಾಲಕ ಮೃತಪಟ್ಟಿದ್ದ. ಈತ ಓದುತ್ತಿದ್ದ ಅದೇ ಶಾಲೆಯ ಬಸ್ ಚಾಲಕನಾಗಿ ಬಾಲಕನ ತಂದೆ ಕರ್ತವ್ಯ ನಿರ್ವಹಿಸುತ್ತಿದ್ದರು ಎಂದು ತಿಳಿದು ಬಂದಿದೆ.
ಇದನ್ನೂ ಓದಿ :ಅಯ್ಯೋ ದುರ್ವಿಧಿಯೇ.. ಹೃದಯಾಘಾತದಿಂದ ಬಾಲಕ ಸಾವು