ಮಂಗಳೂರು: ರೈತರ ಕಲ್ಯಾಣಕ್ಕಾಗಿ ಕೇಂದ್ರ ಸರಕಾರ ಉತ್ತಮ ಕಾಯ್ದೆಗಳನ್ನು ಜಾರಿಗೆ ತಂದಿದ್ದು, ಸುಖಾಸುಮ್ಮನೆ ವಿರೋಧ ಪಕ್ಷಗಳು ಅವುಗಳನ್ನು ವಿರೋಧಿಸುತ್ತಿವೆ ಎಂದು ಬಿಜೆಪಿ ರಾಜ್ಯ ವಕ್ತಾರ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಆರೋಪಿಸಿದರು.
ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ರೈತರ ಉತ್ಪನ್ನ ವ್ಯಾಪಾರ ಮತ್ತು ವಾಣಿಜ್ಯ ಕಾಯ್ದೆ ಹಾಗೂ ರೈತರ ಬೆಲೆ ಭರವಸೆ ಮತ್ತು ಸೇವಾ ಒಪ್ಪಂದ ಮಸೂದೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ಈ ಎರಡು ಮಸೂದೆಗಳಿಗೆ ಲೋಕಸಭೆ ಹಾಗೂ ರಾಜ್ಯಸಭೆಗಳಲ್ಲಿ ಅನುಮೋದನೆ ದೊರೆತಿದೆ ಎಂದರು.
ಕೇಂದ್ರ ಸರ್ಕಾರವು ರಾಜ್ಯ ಹಾಗೂ ರೈತರ ಪರವಾಗಿ ಅತ್ಯಂತ ದಿಟ್ಟ ಹೆಜ್ಜೆ ಇಟ್ಟಿದ್ದು, ಈ ಮೂಲಕ ಈಗಿನ ಕಾನೂನನ್ನು ಬದಲಾವಣೆ ಮಾಡಿದೆ. ರೈತರ ಮಾರುಕಟ್ಟೆ ಪ್ರದೇಶಗಳಿಗೆ ಇದ್ದ ಗೊಂದಲ ನಿವಾರಣೆ ಮಾಡಿ, ಮಧ್ಯವರ್ತಿಗಳಿಲ್ಲದೆ ಆಧುನಿಕ ವ್ಯವಸ್ಥೆ ಮೂಲಕ ಮಾರಾಟಕ್ಕೆ ಅವಕಾಶ ಒದಗಿಸಲಾಗಿದೆ ಎಂದು ಹೇಳಿದರು.
ಮುಂದಿನ ದಿನಗಳಲ್ಲಿ ಎಂಎಸ್ಬಿ ಮೂಲಕ ಬೆಂಬಲ ಬೆಲೆ ನಿಲ್ಲಿಸಲಾಗುತ್ತದೆ ಎಂದು ಪ್ರತಿಪಕ್ಷಗಳು ರೈತರ, ಸದನದ ದಾರಿ ತಪ್ಪಿಸುತ್ತಿದ್ದಾರೆ. ಆದರೆ, ಈಗ ಇರುವ 22 ಕೃಷಿ ಉತ್ಪನ್ನಗಳಿಗೆ ಇನ್ನು ಹೆಚ್ಚಿನ ರೀತಿಯಲ್ಲಿ ಬೆಂಬಲ ಬೆಲೆ ಘೋಷಣೆ ಮಾಡಬೇಕೆನ್ನುವುದು ಸರ್ಕಾರದ ಉದ್ದೇಶವಾಗಿದೆ. ಅಲ್ಲದೆ ಎಪಿಎಂಸಿಗಳು ಮುಂದುವರಿಯುತ್ತವೆ. ಮಂಡಿಗಳೂ ಎಂದಿನಂತೆ ಕಾರ್ಯ ನಿರ್ವಹಿಸುತ್ತವೆ. ಈ ಮೂಲಕ ರೈತರಿಗೆ ಎಪಿಎಂಸಿ, ಮಂಡಿಗಳಲ್ಲಿ ಕಾರ್ಪೊರೇಟ್ ಜಗತ್ತಿನ ಜತೆ ವ್ಯಾಪಾರ ಮಾಡಲು ಅವಕಾಶ ಇರುತ್ತದೆ ಎಂದು ತಿಳಿಸಿದರು.
ಒಂದು ವೇಳೆ ರೈತರಿಗೆ ಹಾಗೂ ಹಣ ಹುಡಿಕೆ ಮಾಡುವವನಿಗೆ ತಕರಾರು ಉಂಟಾದಲ್ಲಿ ರೈತನ ಜಮೀನು ಮತ್ತು ಹಣ ಹಾಕುವವನಿಗೆ ಯಾವ ಸಂಬಂಧವೂ ಇರುವುದಿಲ್ಲ. ಯಾವುದಾದರೂ ತಕರಾರು ಉಂಟಾದಲ್ಲಿ 30 ದಿನಗಳ ಒಳಗೆ ವಿವಾದ ಇತ್ಯರ್ಥ ಮಾಡುವ ವ್ಯವಸ್ಥೆ ಮಾಡಲಾಗುತ್ತದೆ. ಈ ಎಲ್ಲಾ ನೀತಿ ರೈತರಿಗೆ ಉಪಯೋಗವಾಗುವಂತಿದ್ದರೂ ವಿರೋಧ ಪಕ್ಷಗಳು ಇವುಗಳಿಗೆ ಆಕ್ಷೇಪ ವ್ಯಕ್ತಪಡಿಸುತ್ತಿವೆ ಎಂದು ಹೇಳಿದರು.