ಪುತ್ತೂರು: ಮಂಗಳೂರು ವಿಭಾಗದ ಭಜನಾ ಮಹಾಮಂಡಲ ಹಾಗೂ ಹನುಮಗಿರಿ ಕ್ಷೇತ್ರದ ಆಶ್ರಯದಲ್ಲಿ ಈಶ್ವರಮಂಗಲದ ಹನುಮಗಿರಿ ಕ್ಷೇತ್ರದ ಪುರಂದರದಾಸ ಭಜನಾಂಗಣದ ಕನಕದಾಸ ಮಂಟಪದಲ್ಲಿ ಭಜನಾ ಸಮರ್ಪಣಾ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು.
ಕಾರ್ಯಕ್ರಮದ ವೇಳೆ ಮಾತನಾಡಿದ ಕೇಂದ್ರದ ಪಶುಸಂಗೋಪನೆ ಮತ್ತು ಹೈನುಗಾರಿಕೆ ರಾಜ್ಯ ಸಚಿವ ಪ್ರತಾಪಚಂದ್ರ ಸಾರಂಗಿ, ದೇಶದಲ್ಲಿ ಭಜನೆಗೆ ದೊಡ್ಡ ಪರಂಪರೆಯಿದ್ದು, ಭಗವಂತನಲ್ಲಿ ಆತ್ಮ ನಿವೇದನೆ ಮಾಡಿಕೊಂಡು ಅನುಗ್ರಹ ಪಡೆಯಲು ಹಾಗೂ ಆಧ್ಮಾತ್ಮಿಕ ಉನ್ನತಿಗೆ ಸರ್ವ ಶ್ರೇಷ್ಠ ಮಾಧ್ಯಮ. ಬಹಳಷ್ಟು ಪ್ರಾಚೀನವೂ, ನಿತ್ಯ ನವೀನವೂ ಆಗಿರುವ ಭಜನೆ ಭಕ್ತಿಯ ಸಾಧನವಾಗಿದ್ದು, ಕಲಿಯುಗದಲ್ಲಿ ಭಜನೆಗೆ ಭಾರಿ ಮಹತ್ವವಿದೆ ಎಂದು ಅಭಿಪ್ರಾಯಪಟ್ಟರು.
ಮೋಕ್ಷಕ್ಕೆ ಅರ್ಹವಾದ ಮನುಷ್ಯ ಜನ್ಮ ಪ್ರಾಪ್ತಿಯಾಗಿರುವುದು ನಮ್ಮ ಪುಣ್ಯದ ಫಲ. ನಾವು ಸತ್ಸಂಗಗಳ ಮೂಲಕ ಮೋಕ್ಷ ಪಡೆಯಬಹುದಾಗಿದೆ. ಅತ್ಯಂತ ದುರಾಹಂಕಾರಿ, ಪಾಪಿ ಮನುಷ್ಯ ಕೂಡ ಭಕ್ತಿಯಿಂದ ಭಜನೆ ಮಾಡಿದರೆ ದೇವರು ಒಲಿಯುತ್ತಾರೆ. ಅಹಂಕಾರ ಶೂನ್ಯತೆಯಾಗುತ್ತದೆ. ಇದಕ್ಕೆ ಪುರಾಣಗಳಲ್ಲಿ ಬಹಳಷ್ಟು ನಿದರ್ಶನಗಳಿವೆ ಎಂದರು.
ಭಜಕರು ಭಜನಾಂಗಣದಲ್ಲಿ 1,300 ದೀಪಗಳನ್ನು ಬೆಳಗಿ 6 ಭಜನೆ ಹಾಡುಗಳನ್ನು ಹಾಡಿದರು. 48 ನಿಮಿಷಗಳ ಈ ವಿಶೇಷ ಭಜನಾ ಕಾರ್ಯಕ್ರಮ ಎಲ್ಲರನ್ನು ರೋಮಾಂಚನ ಗೊಳಿಸಿತ್ತು. ಪೇಜಾವರ ವಿಶ್ವೇಶ್ವರ ತೀರ್ಥ ಸ್ವಾಮೀಜಿಯವರ ನಿಧನದ ಹಿನ್ನೆಲೆ ಕಾರ್ಯಕ್ರಮವನ್ನು ಅವರಿಗೆ ಸಮರ್ಪಿಸಲಾಯಿತು.