ಮಂಗಳೂರು: ಬೆಂಗಳೂರಿನಲ್ಲಿ ನಾಪತ್ತೆಯಾಗಿದ್ದ ಒಂದೇ ಫ್ಲ್ಯಾಟ್ ನ ನಾಲ್ವರು ಮಕ್ಕಳನ್ನು ನಗರದ ಪಾಂಡೇಶ್ವರ ಠಾಣೆಯ ಪೊಲೀಸರು ಬೆಂಗಳೂರಿನ ಸೋಲದೇವನ ಹಳ್ಳಿ ಠಾಣೆಯ ಪೊಲೀಸರ ಸಮಕ್ಷಮ ಪೋಷಕರ ಸುಪರ್ದಿಗೆ ಒಪ್ಪಿಸಿದರು.
ಮಂಗಳವಾರ 6.30 ಸುಮಾರಿಗೆ ಬಾಲಕಿಯ ಅಣ್ಣ ಬಂದಿದ್ದು, ಆ ಬಳಿಕ ಬಾಲಕರ ತಂದೆ ಹಾಗೂ ಕುಟುಂಬಸ್ಥರು ಆಗಮಿಸಿದ್ದಾರೆ. ಇವರೊಂದಿಗೆ ಸೋಲದೇವನ ಹಳ್ಳಿ ಪೊಲೀಸ್ ಇನ್ಸ್ಪೆಕ್ಟರ್ ಸಹಿತ ಸಿಬ್ಬಂದಿಯೂ ಇದ್ದರು. ಪಾಂಡೇಶ್ವರ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ರೇವತಿಯವರು ಬೆಂಗಳೂರಿನ ಉಪ್ಪಾರಪೇಟೆ ಪೊಲೀಸರ ಸಮಕ್ಷಮ ಮಕ್ಕಳನ್ನು ಪೋಷಕರ ಸುಪರ್ದಿಗೆ ಒಪ್ಪಿಸಿದ್ದಾರೆ.
ಈ ಬಗ್ಗೆ ಪೋಷಕರಲ್ಲೊಬ್ಬರಾದ ಪ್ರಕಾಶ್ ಶೆಟ್ಟಿ ಮಾತನಾಡಿ, ನಾಪತ್ತೆಯಾದ ಮಕ್ಕಳನ್ನು ಪತ್ತೆ ಹಚ್ಚುವಲ್ಲಿ ಸಹಕರಿಸಿರುವ ಆಟೋ ರಿಕ್ಷಾ ಚಾಲಕರು ಹಾಗೂ ಪೊಲೀಸರ ಶ್ರಮ ಮೆಚ್ಚುವಂಥದ್ದು, ಅವರಿಗೆ ಧನ್ಯವಾದ ತಿಳಿಸುತ್ತೇನೆ. ಎಲ್ಲಾ ಮಕ್ಕಳು ಸುರಕ್ಷಿತವಾಗಿರುವುದು ಸಂತೋಷ ತಂದಿದೆ. ಮಕ್ಕಳು ಯಾಕೆ ಮನೆ ಬಿಟ್ಟು ಬಂದಿದ್ದಾರೆಂದು ಕಾರಣ ತಿಳಿದಿಲ್ಲ. ಈ ಬಗ್ಗೆ ಇನ್ನೂ ಮಕ್ಕಳಲ್ಲಿ ಮಾತನಾಡಿಲ್ಲ. ಪೊಲೀಸರು ಕಾರ್ಯಾಚರಣೆ ನಡೆಸಿರೋದಷ್ಟೇ ನಮ್ಮ ಗಮನಕ್ಕೆ ಬಂದಿದೆ ವಿನಃ ಬೇರೆ ಯಾವುದೇ ವಿಚಾರ ತಿಳಿದಿಲ್ಲ. ಮೊನ್ನೆಯಿಂದ ನಾಲ್ವರು ಮಕ್ಕಳ ಪೋಷಕರೂ ನಾವು ಊಟ ನಿದ್ದೆಯಿಲ್ಲದೆ ಮಕ್ಕಳನ್ನು ಹುಡುಕಾಡುತ್ತಿದ್ದೆವು. ಇದೀಗ ನಮ್ಮ ಮಕ್ಕಳು ಸಿಕ್ಕಿರೋದು ಸಂತಸ ತಂದಿದೆ ಎಂದರು.
ಬಾಲಕಿಯ ಅಣ್ಣ ದೀಪಕ್ ಮಾತನಾಡಿ, ಮಕ್ಕಳನ್ನು ಸುರಕ್ಷಿತವಾಗಿ ಪೊಲೀಸರಿಗೊಪ್ಪಿಸಿದ ಆಟೊ ಚಾಲಕರು ಹಾಗೂ ಮಕ್ಕಳಿಗೆ ಮನೆಗೆ ಕರೆ ಮಾಡಲು ಫೋನ್ ಕೊಟ್ಟು ಸಹಕರಿಸಿದ ಹೈದರಾಬಾದ್ ನ ವ್ಯಕ್ತಿಗೂ, ಮಕ್ಕಳ ಪತ್ತೆಗೆ ಕಾರ್ಯಾಚರಣೆ ನಡೆಸಿರುವ ಪೊಲೀಸರಿಗೆ ಧನ್ಯವಾದ ತಿಳಿಸುತ್ತೇವೆ. ಇಂದು ಮಕ್ಕಳೆಲ್ಲಾ ಮಂಗಳೂರಿನಲ್ಲಿ ಪತ್ತೆಯಾಗಿದ್ದಾರೆಂದು ಮಾಹಿತಿ ತಿಳಿದ ತಕ್ಷಣ ಪೊಲೀಸರು ನಮ್ಮನ್ನು ಇಲ್ಲಿಗೆ ಕರೆತಂದಿದ್ದಾರೆ. ಮಕ್ಕಳು ಯಾಕೆ ಈ ರೀತಿ ಮಾಡಿದ್ದಾರೆಂದು ನಾವು ಅವರಲ್ಲಿ ಕೂಲಂಕಷವಾಗಿ ವಿಚಾರಿಸಿದ ಬಳಿಕ ತಿಳಿಯಲಿದೆ ಎಂದು ಹೇಳಿದರು.
ಇದನ್ನೂ ಓದಿ: ಕಲಬುರಗಿ: ಸಿದ್ದರಾಮಯ್ಯಗೆ ಭೂಕಂಪನದ ಅನುಭವ; ಗ್ರಾಮದಿಂದಲೇ ಕಂದಾಯ ಸಚಿವರಿಗೆ ಮಾಜಿ ಸಿಎಂ ಕರೆ