ಮಂಗಳೂರು: ವಿವಿಧ ಬೇಡಿಕೆಗೆ ಆಗ್ರಹಿಸಿ ಪುತ್ತೂರು ತಾಲೂಕು ಅಕ್ಷರ ದಾಸೋಹ ನೌಕರರ ಸಂಘ ಮತ್ತು ಋಣಮುಕ್ತ ಹೋರಾಟ ಸಮಿತಿ ಜಂಟಿ ಆಶ್ರಯದಲ್ಲಿ ಇಂದು ಮಿನಿ ವಿಧಾನಸೌಧದ ಎದುರು ಪ್ರತಿಭಟನೆ ನಡೆಸಿದರು.
“ಅಂದು ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಎಂದರೆ ಇಂದು ಕೋಮುವಾದಿಗಳಿಂದ ಭಾರತವನ್ನು, ಭಾರತೀಯರನ್ನೂ ಉಳಿಸಿ” ಎಂಬ ಘೋಷ ವಾಕ್ಯದಡಿ ಪ್ರತಿಭಟನೆ ನಡೆಸಿದರು.
ಅಕ್ಷರ ದಾಸೋಹ ನೌಕರರ ವೇತನ ಏರಿಸಲು ಸತತ ಹೋರಾಟ ನಡೆಯುತ್ತಿದ್ದರೂ ಸ್ಪಂದಿಸದ ಸರ್ಕಾರ, ಇದೀಗ ಕಳೆದ 3 ತಿಂಗಳಿಂದ ವೇತನವನ್ನೂ ನೀಡದೆ ಬೀದಿಪಾಲು ಮಾಡುತ್ತಿದೆ. ಬಿಜೆಪಿ ಸರ್ಕಾರ ಕಾರ್ಮಿಕ ವಿರೋಧಿಯಾಗಿ, ಆಡಳಿತ ನಡೆಸುತ್ತಾ ಬಂಡವಾಳಶಾಹಿಗಳ ಸಾಲಗಳನ್ನು ಮನ್ನಾ ಮಾಡುತ್ತಿದೆ ಎಂದು ಕಿಡಿಕಾರಿದರು. ಬಡ ಮಹಿಳೆಯರು ಸಾಲಮನ್ನಾಕ್ಕಾಗಿ ಕೂಗಾಡಿದರೂ ಸ್ಪಂದಿಸದಿರುವುದು ಬಹುಸಂಖ್ಯಾತ ದುಡಿಯುವ ವರ್ಗದ ದುರಂತವೆಂದು ಕಾರ್ಮಿಕ ಮುಖಂಡರುವ ಆಗಿ ನ್ಯಾಯವಾದಿ ಬಿ.ಎಂ. ಭಟ್ ಹೇಳಿದರು.
ಅಕ್ಷರದಾಸೋಹ ನೌಕರರು ಕನಿಷ್ಠ ವೇತನ ಸವಲತ್ತುಗಳಿಗಾಗಿ ಹೋರಾಡುತ್ತಿದ್ದರೆ, ಸರ್ಕಾರ ಬಂಡವಾಳಶಾಹಿಗಳ ಹಿತ ರಕ್ಷಣೆಗಾಗಿ ಕಾರ್ಮಿಕ ಕಾನೂನುಗಳನ್ನು, ಭೂ ಸುಧಾರಣೆ ಕಾನೂನುಗಳನ್ನು ತಿದ್ದುಪಡಿ ಮಾಡುತ್ತಿದೆ. ಲಾಕ್ ಡೌನ್ ಸಂತ್ರಸ್ತರೂ ಆದ ಈ ಬಡಜನರ ರಕ್ಷಣೆ ಬಗ್ಗೆ ಕಾಳಜಿ ಇಲ್ಲದೆ ಸರ್ಕಾರ ಕೊರೊನಾ ಸಮಸ್ಯೆ ತಡೆಯುವಲ್ಲಿಯೂ ವಿಫಲವಾಗಿದೆ ಎಂದು ಆರೋಪಿಸಿದರು.
ಕರಾವಳಿಯಲ್ಲಿ ಅಂದು ಲಾಕ್ ಡೌನ್ ಮತ್ತು ಈಗ ಅತಿಯಾದ ಮಳೆಯಿಂದ ಸಂತ್ರಸ್ತರೂ ಆದ ಬಡ ಕಾರ್ಮಿಕರಿಗೆ, ಅಕ್ಷರದಾಸೋಹ ನೌಕರರಿಗೆ ವಿಶೇಷ ಪ್ಯಾಕೇಜ್ ಘೋಷಿಸಬೇಕೆಂದು ಅವರು ಸರ್ಕಾರಕ್ಕೆ ಒತ್ತಾಯಿಸಿದರು.
ಸರ್ಕಾರವೇ ಜನರನ್ನು ಜೀತದಾಳುಗಳಂತೆ ದುಡಿಸುತ್ತಿರುವುದಕ್ಕೆ ಅಕ್ಷರದಾಸೋಹ ನೌಕರರೇ ಸಾಕ್ಷಿಯಾಗಿದ್ದಾರೆ ಎಂದು ಟೀಕಿಸಿದರು. ಪ್ರತಿಭಟನೆ ಬಳಿಕ ಸಹಾಯಕ ಕಮೀಷನರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಈ ವೇಳೆ ಬೀಡಿ ಕಾರ್ಮಿಕ ಸಂಘದ ಅಧ್ಯಕ್ಷ ಗುಡ್ಡಪ್ಪ ಗೌಡ, ಅಕ್ಷರದಾಸೋಹ ನೌಕರ ಸಂಘದ ತಾಲೂಕು ಅಧ್ಯಕ್ಷರಾದ ಸುಧಾ, ಕಾರ್ಮಿಕ ಮುಖಂಡರಾದ ಜಯರಾಮಮಯ್ಯ, ನೆಬಿಸಾ, ಮಹೇಶ್ ಎಲ್.ಪಿ. ಯಶೋಧ ಸೇರಿ ಇತರರು ಇದ್ದರು.