ಮಂಗಳೂರು: ವೀಕೆಂಡ್ ಕರ್ಫ್ಯೂ ಮಧ್ಯೆ ಭಾನುವಾರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 372 ಮದುವೆಗಳು ಅನುಮತಿ ಪಡೆದು ನಡೆದಿದೆ.
ಭಾನುವಾರ ಬಹಳಷ್ಟು ಮದುವೆಗಳು ನಿಗದಿಯಾಗಿದ್ದು, ಅನುಮತಿ ಪಡೆದು 50 ಮಂದಿಯನ್ನು ಸೇರಿಸಿ ಮದುವೆ ನಡೆಸಲು ಅವಕಾಶ ನೀಡಲಾಗಿತ್ತು. ಅದರಂತೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 2225, ಪುರಸಭೆ ವ್ಯಾಪ್ತಿಯಲ್ಲಿ 65 ಮತ್ತು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 82 ಮದುವೆಗಳು ನಡೆದಿದೆ.
ಕಟೀಲ್ನಲ್ಲಿ 47 ಜೋಡಿ ವಿವಾಹ :
ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ 47 ಜೋಡಿಗಳ ವಿವಾಹ ನಡೆಯಿತು. ದೇಗುಲದಲ್ಲಿ ಮದುವೆಯಾಗಲು 88 ಜೋಡಿಗಳು ನೋಂದಣಿ ಮಾಡಿದ್ದರು. ಆದರೆ, 47 ಜೋಡಿಗಳ ವಿವಾಹ ಮಾತ್ರ ನೆರವೇರಿದೆ. ವಿವಾಹಕ್ಕೆ ವಧು ವರರ ಕಡೆಯಿಂದ ಒಟ್ಟು 10 ಮಂದಿಗೆ ಮಾತ್ರ ಪಾಲ್ಗೊಳ್ಳಲು ಅವಕಾಶ ನೀಡಲಾಗಿತ್ತು. ದೇಗುಲದ ಸರಸ್ವತಿ ಸದನದ ನಾಲ್ಕು ಕಡೆಗಳಲ್ಲಿ ವಿವಾಹಕ್ಕೆ ವ್ಯವಸ್ಥೆ ಮಾಡಲಾಗಿತ್ತು.