ಮಂಗಳೂರು: ಕಾರು ಖರೀದಿಯ ಹೆಸರಿನಲ್ಲಿ ನಕಲಿ ದಾಖಲಾತಿ ಸೃಷ್ಟಿಸಿ ಬ್ಯಾಂಕಿನಿಂದ 13 ಲಕ್ಷ ರೂ ಸಾಲ ಪಡೆದು ವಂಚಿಸಿರುವ ಬಗ್ಗೆ ಮಂಗಳೂರಿನ ಬಂದರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳೂರಿನ ಕೆಥೊಲಿಕ್ ಬ್ಯಾಂಕ್‌ನ ಕಂಕನಾಡಿ ಕಚೇರಿಯಲ್ಲಿ ಮುಹಮ್ಮದ್ ಮುಸ್ತಫಾ ಎಂಬುವರು ಕಾರು ಖರೀದಿಗಾಗಿ 13 ಲಕ್ಷ ರೂ ಸಾಲ ಪಡೆದುಕೊಂಡಿದ್ದರು. ಕಾರು ವಿತರಕ ಸಂಸ್ಥೆ ಮೆ ಒನ್ ಫೀನಿಯೋ ವೆಂಚರ್ಸ್ ಪ್ರೈವೇಟ್ ಲಿಮಿಟೆಡ್ನ ನಿರ್ದೇಶಕ ಅಬ್ದುಲ್ ಅಜೀಜ್ ಮತ್ತು ಇರ್ಫಾನ್ ಖಾದರ್ ಎಂಬುವರಿಂದ ಕಾರು ಖರೀದಿ ಬಗ್ಗೆ ಬ್ಯಾಂಕಿಗೆ ದಾಖಲೆಯನ್ನು ನೀಡಿ ಅಬ್ದುಲ್ ಲತೀಫ್ ಮತ್ತು ಜೈನಾಬಿ ಅವರನ್ನು ಜಾಮೀನುದಾರರಾಗಿ ಸೂಚಿಸಿ ಇವರು ಸಾಲ ಪಡೆದಿದ್ದರು. ಆದರೆ, ಸಾಲ ಪಡೆದ ಬಳಿಕ ಮುಹಮ್ಮದ್ ಮುಸ್ತಫಾ ಅವರು ಸಾಲದ ಕಂತುಗಳನ್ನು ಪಾವತಿಸಿರಲಿಲ್ಲ. ಅವರ ದಾಖಲೆಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ಅವರು ನಕಲಿ ದಾಖಲೆ ಸೃಷ್ಟಿಸಿರುವುದು ಬೆಳಕಿಗೆ ಬಂದಿದೆ.
ಇದನ್ನೂ ಓದಿ: ಸಾಲ ಕೊಡದಿದ್ರೂ 5 ಕೋಟಿ ವಸೂಲಿಗೆ ಬಂದ ಬ್ಯಾಂಕ್ ಅಧಿಕಾರಿ: ಡಿಸಿಸಿ ಮ್ಯಾನೇಜರ್ ವಂಚನೆಯ ರೋಚಕ ಕತೆ
ಇವರಿಗೆ ದಾಖಲಾತಿ ನೀಡಿರುವ ಕಾರು ವಿತರಕ ಸಂಸ್ಥೆಯು ಕೂಡ 2020 ರಲ್ಲಿ ಬಂದ್ ಆಗಿರುವುದು ತಿಳಿದುಬಂದಿದೆ. ಬ್ಯಾಂಕ್‌ಗೆ ಮೋಸ ಮಾಡುವ ಉದ್ದೇಶದಿಂದಲೇ ಸಾಲ ಪಡೆದು ಮರುಪಾವತಿಸದೆ ವಂಚಿಸಿರುವ ಬಗ್ಗೆ ಬ್ಯಾಂಕ್ ಮ್ಯಾನೇಜರ್ ಬಂದರ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.