ಚಿತ್ರದುರ್ಗ : ಕೊರೊನಾ ಲಾಕ್ಡೌನ್ ಹಿನ್ನೆಲೆಯಲ್ಲಿ ಸರ್ಕಾರ ಉಚಿತವಾಗಿ ಪಡಿತರ ನೀಡಲು ಈಗಾಗಲೇ ಆದೇಶ ಹೊರಡಿಸಿದೆ. ಆದರೆ, ಚಿತ್ರದುರ್ಗದಲ್ಲಿ ಬಡವರಿಗೆ ಸರ್ಕಾರ ನೀಡುವ ಉಚಿತ ಪಡಿತರಕ್ಕೂ ಹಣ ವಸೂಲಿ ಮಾಡುತ್ತಿರುವುದು ಬೆಳಕಿಗೆ ಬಂದಿದೆ.
ಚಿತ್ರದುರ್ಗ ನಗರದ ಐಯುಡಿಪಿ ಬಡಾವಣೆಯ 6ನೇ ಕ್ರಾಸ್‌ನಲ್ಲಿರುವ ನ್ಯಾಯಬೆಲೆ ಅಂಗಡಿಯಲ್ಲಿ ಉಚಿತ ಪಡಿತರಕ್ಕೂ ಹಣ ಪಡೆಯುತ್ತಿರುವ ದೃಶ್ಯ ಲಭ್ಯವಾಗಿದೆ. ಒಂದು ಪಡಿತರ ಕಾರ್ಡಿಗೆ 20 ರೂ. ಫಿಕ್ಸ್ ಮಾಡಲಾಗಿದೆ. ಸರ್ಕಾರದ ಆದೇಶ ಗಾಳಿಗೆ ತೂರಿದ ನ್ಯಾಯಬೆಲೆ ಅಂಗಡಿಗಳು, ಸರ್ಕಾರದ ನಿಯಮದಂತೆ ಪಡಿತರ ನೀಡುವಲ್ಲಿ ತಾರತಮ್ಯ ಮಾಡುತ್ತಿವೆ.
ಈಗಾಗಲೇ ಹಣ ವಸೂಲಿ ಮಾಡ್ತಿರುವ ದೃಶ್ಯ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ತೂಕ ಮಾಡುವಲ್ಲೂ ವಂಚನೆಯ ಆರೋಪ ಕೇಳಿ ಬಂದಿದೆ. ಬಡವರ ಪಾಡು ದೇವರು ವರ ಕೊಟ್ಟರೂ ಪೂಜಾರಿ ವರ ಕೊಡ್ತಿಲ್ಲ ಎಂಬಂತಾಗಿದೆ. ಹಣ ಪಡೆದು ಪಡಿತರ ನೀಡುತ್ತಿರುವುದು ಆಕ್ರೋಶಕ್ಕೆ ಕಾರಣವಾಗಿದೆ.